ಜಿಲ್ಲೆ

ವಿಮಾ ಪೂರ್ಣ ಮೊತ್ತ 18ಕ್ಕೆ ಬಿಡುಗಡೆ

ಶಿರಸಿ: ರಾಜ್ಯದ ರೈತರಿಗೆ ಈ ಮೊದಲೇ ನೀಡಬೇಕಿದ್ದ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯ ಸಂಪೂರ್ಣ ಮೊತ್ತವನ್ನು ಆ.18ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿ 1.39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಂಡ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ನೂತನ ಆಡಳಿತ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷ ಬೆಳೆ ಸರ್ವೆ ವೇಳೆ ಶೇಕಡ 42ರಷ್ಟು ಮಿಸ್ ಮ್ಯಾಚ್ ಆಗಿತ್ತು. ಹಾಗಾಗಿ ವಿಳಂಬವಾಗಿತ್ತು. ಇದರಿಂದ ರೈತರು ಸಮಸ್ಯೆ ಅನುಭವಿಸಿದ್ದರು. ಇದನ್ನು ಮನಗಂಡು ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಿಂದ ವಂಚಿತರಾದವರಿಗೆ ಈ ಬಾರಿ ಪೂರ್ಣ ಮೊತ್ತವನ್ನು ನೀಡಲು ಕ್ರಮವಹಿಸಲಾಗಿದೆ ಎಂದರು.

ಕರೊನಾ ಕಾರಣಕ್ಕೆ ಇಂದು ಬಹು ತೇಕ ಉದ್ದಿಮೆಗಳು ಮುಚ್ಚುತ್ತಿವೆ. ಲಾಕ್​ಡೌನ್ ನಂತರ ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಆದರೆ ಕೃಷಿ ಕ್ಷೇತ್ರ ಮಾತ್ರ ಬಿಡುವಿಲ್ಲದೇ ಮುಂದುವರಿಯುತ್ತಿದೆ. ಕೃವಿವಿಗಳು ಕೇವಲ ಬೋಧನೆ ಗಷ್ಟೇ ಸೀಮಿತವಾಗದೇ ರೈತಸ್ನೇಹಿ ಆಗಬೇಕು. ಗದ್ದೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. ಕರೊನಾ ಕಾರಣದಿಂದ ಮಹಾನಗರಗಳ ಕೆಲಸ ಬಿಟ್ಟು ಯುವಕರು ಹಳ್ಳಿಗಳಿಗೆ ತೆರಳಿ ಕೃಷಿಯಲ್ಲಿ ತೊಡಗುತ್ತಿದ್ದಾರೆ. ಇಂತಹ ಯುವಕರ ಮೂಲಕ ಕೃಷಿಕ್ಷೇತ್ರವನ್ನು ಆಧುನೀಕರಣ ದತ್ತ ಕೊಂಡೊಯ್ಯಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕೃಷಿ ಕ್ಷೇತ್ರದ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿ ವಿಜ್ಞಾನ ಕೇಂದ್ರಗಳು, ಅದಕ್ಕೆ ಪೂರಕ ಸಂಸ್ಥೆಗಳನ್ನು ಉನ್ನತೀಕರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಎನ್​ಡಬ್ಲು್ಯಕೆಆರ್​ಟಿಸಿ ಅಧ್ಯಕ್ಷ ವಿ.ಎಸ್. ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಗೌಡ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ಐಸಿಎಆರ್ ಉಪಮಹಾ ನಿರ್ದೇಶಕ ಡಾ.ಎ.ಕೆ.ಸಿಂಗ್, ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸುರೇಶ ಗೊಣಸಗಿ, ಶಶಿಮೌಳಿ ಕುಲಕರ್ಣಿ, ವೈ.ಎನ್.ಪಾಟೀಲ, ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು, ತಹಸೀಲ್ದಾರ್ ಎಂ.ಆರ್.ಕುಲಕರ್ಣಿ, ವಿಧಾನಸಭಾಧ್ಯಕ್ಷರು ಇದ್ದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ಸ್ವಾಗತಿಸಿದರು. ಶಿವಶಂಕರಮೂರ್ತಿ ನಿರೂಪಿಸಿದರು. ಐಸಿಎಆರ್ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್ ವಂದಿಸಿದರು.