ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಸಿವಾದ ಮತ್ತು ಪರಂಪರೆ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ವಿಮರ್ಶೆಯ ಹೊಸ ಕಲ್ಪನೆಗಳನ್ನು ಕಟ್ಟಿಕೊಟ್ಟವರು ನವ್ಯ ವಿಮರ್ಶಕರೆಂದೇ ಪರಿಗಣಿತವಾಗಿದ್ದ ಡಾ.ಗಿರಡ್ಡಿ ಗೋವಿಂದರಾಜ ಎಂದು ಕುಮುಟಾದ ವಿಮರ್ಶಕ ಡಾ.ಎಂ.ಜಿ.ಹೆಗಡೆ ಅಭಿಪ್ರಾಯಪಟ್ಟರು.
ಡಾ. ಗಿರಡ್ಡಿ ಗೋವಿಂದರಾಜರ ಪುಣ್ಯಸ್ಮರಣೆ ನಿಮಿತ್ತ ಡಾ. ಗಿರಡ್ಡಿ ಗೋವಿಂದರಾಜ ಪ್ರತಿಷ್ಠಾನ ವತಿಯಿಂದ ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಗಿರಡ್ಡಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಬಳಿಕ ಓದುವ ದಾರಿಗಳ ನಿರಂತರ ಅನ್ವೇಷಣೆಯಲ್ಲಿ ತೊಡಗಿದ್ದರು. ಆ ಮೂಲಕ ವಿಮರ್ಶೆ ಪ್ರಕಾರಕ್ಕೆ ಹೊಸ ಕಲ್ಪನೆ ಕಟ್ಟಿಕೊಟ್ಟರು. ಇದರೊಂದಿಗೆ ವಿಶಾಲವಾದ ಸಾಹಿತ್ಯದ ಕೇಂದ್ರೀಯ ಕಾಳಜಿಯಾಗಿ ಪರಂಪರೆಯ ಶೋಧ ಮತ್ತು ಅದರ ಮಹತ್ವ ಗುರುತಿಸಬೇಕು ಎನ್ನುವ ಆಶಯ ಅವರದ್ದಾಗಿತ್ತು ಎಂದರು.
ಸಾಹಿತ್ಯ ಅಥವಾ ವಿಮರ್ಶೆಯ ಅಪೇಕ್ಷೆ ಸ್ವಸ್ಥ ಸಮಾಜ ನಿರ್ಮಿಸುವ ಉದ್ದೇಶ ಸಾಹಿತ್ಯದ್ದಾಗಿರಬೇಕು. ಮುಕ್ತ ಮುತ್ತು ಸಾಮೂಹಿಕ ಸಂವಾದ ಸಾಧ್ಯವಾಗಬೇಕು ಎನ್ನುವುದು ಗಿರಡ್ಡಿಯವರ ವಿಮರ್ಶೆಯ ನೆಲೆ ಮತ್ತು ಆದ್ಯತೆಯಾಗಿತ್ತು. ಕೊನೆವರೆಗೂ ನಿರಂತರ ಉತ್ಸಾಹ ಉಳಿಸಿಕೊಂಡಿದ್ದ ಅವರು, ತಣ್ಣಗಿನ ದನಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಧಾರವಾಡದ ಡಾ. ಗಿರಡ್ಡಿ, ಕೀರ್ತಿನಾಥ ಕುರ್ತಕೋಟಿ ಹಾಗೂ ಜಿ.ಎಸ್.ಆಮೂರ ಭಿನ್ನ, ಭಿನ್ನ ನೆಲೆಗಳಲ್ಲಿ ವಿಮರ್ಶೆಯ ಕಲ್ಪನೆ ಕಟ್ಟಿಕೊಟ್ಟು ವಿಮರ್ಶಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹನೀಯರು ಎಂದು ಬಣ್ಣಿಸಿದರು.
ನಂತರ ನಡೆದ ಸಂವಾದದಲ್ಲಿ ಡಾ. ಮುದೇನೂರ ನಿಂಗಣ್ಣ, ಹರ್ಷ ಡಂಬಳ, ವೆಂಕಟೇಶ ಮಾಚಕನೂರ, ಶ್ರೀನಿವಾಸ ವಾಡಪ್ಪಿ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ ಸೇರಿ ಅನೇಕ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಡಾ. ಶಶಿಧರ ತೋಡಕರ, ಸರೋಜಾ ಗಿರಡ್ಡಿ, ಇತರರು ಇದ್ದರು. ಗಿರಡ್ಡಿ ಗೋವಿಂದರಾಜ ಪ್ರತಿಷ್ಠಾನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಬಾಳಣ್ಣ ಶೀಗಿಹಳ್ಳಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.