ಹಾಸನ: ಸಾಹಿತ್ಯ ವಿಮರ್ಶೆ, ಲೋಕ ವಿಮರ್ಶೆಯಾಗಬೇಕು. ವಿಮರ್ಶೆ ಕೂಡ ಸಾಮಾಜಿಕ ಮತ್ತು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿ ಎಂದು ನಾಡಿನ ಖ್ಯಾತ ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಆರಂಭವಾದ ಹೊಯ್ಸಳ ಸಾಹಿತ್ಯೋತ್ಸವದ ‘ವಿಮರ್ಶೆಯ ಕಷ್ಟ ಸುಖ’ ಎಂಬ ಗೋಷ್ಠಿಯಲ್ಲಿ ಸಂವಾದಕರಾಗಿ ಮಾತನಾಡಿದ ಅವರು, ವಿಮರ್ಶೆ ಎಂಬುದು ಸಾಹಿತ್ಯ ಕೃತಿಗೆ ಮಾತ್ರ ಸೀಮಿತವಾಗುವುದಿಲ್ಲ. ವಿಮರ್ಶೆ ಎಂಬ ಪದಕ್ಕೆ ವಿಶಾಲ ಅರ್ಥ ಇದೆ ಎಂದು ಹೇಳಿದರು.
ಗೋಷ್ಠಿ ನಿರ್ವಹಣೆ ಮಾಡಿದ ಡಾ.ಎಚ್.ಎಸ್.ಸತ್ಯನಾರಾಯಣ ಅವರು, ವಿಮರ್ಶೆಗೆ ಬಿಕ್ಕಟ್ಟು ಎದುರಾಗಿದೆ ಎಂಬುದಾಗಿ ಸಂವಾದಕರು ಹೇಳಿದ್ದಾರೆ. ಹಿಂದೆ ಹಾ.ಮಾ. ನಾಯಕರು, ‘ಪತ್ರಿಕೆಗಳು ಮೂರು ಕಾಲಿನ ಮೇಜುಗಳಾಗಿವೆ, ನಾಲ್ಕನೇ ಕಾಲು ಸಾಹಿತ್ಯದ ಕಾಲಾಗಬೇಕು’ ಎಂಬ ಮಾತು ಹೇಳಿದ್ದರು ಎಂದು ನೆನಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚ.ಹ. ರಘುನಾಥ್, ಪತ್ರಿಕೆ ಉದ್ಯಮವಾಗಿ ಪರಿವರ್ತನೆ ಆಗಿದೆ. ಅಲ್ಲಿ ಸಾಹಿತ್ಯಕ್ಕೆ ಜಾಗ ಬೇಕು ಎಂಬ ನಿರೀಕ್ಷೆ ಏಕೆ, ಇದು ದುಬಾರಿ ಅಪೇಕ್ಷೆ. ಈಗ ಕಾಲ ಬದಲಾಗಿದೆ. ಪತ್ರಿಕೆ ಜಾಗದಲ್ಲಿ ಅನೇಕ ಮಾಧ್ಯಮಗಳಿದ್ದು, ಅವುಗಳನ್ನು ಸಾಹಿತ್ಯ ಉದ್ದೇಶಕ್ಕೆ ಬಳಸಿಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೇ ಎನಿಸುತ್ತದೆ. ಓದುವವರ ಸ್ವರೂಪ ಬದಲಾಗಿದೆ. ಅಂತೆಯೇ ಡಿಜಿಟಲ್ ಮಾಧ್ಯಮ ಪ್ರಭಾವಿಯಾಗಿದೆ. ಅದನ್ನು ಬಳಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.
ವಿಮರ್ಶಕರು ಹೊಸ ತಲೆಮಾರಿನ ಬಗ್ಗೆ ಗಮನ ಕೊಡುತ್ತಿಲ್ಲ ಎಂಬ ಆರೋಪವಿದೆ ಎಂದು ಸತ್ಯನಾರಾಯಣ ಹೇಳಿದಾಗ, ತಾರಿಣಿ ಶುಭದಾಯಿನಿ ಪ್ರತಿಕ್ರಿಯಿಸಿ, ‘ವಿಮರ್ಶೆಯನ್ನು ಒಂದು ವರ್ಗ ನಿಯಂತ್ರಣ ಮಾಡುತ್ತಿದೆ. ವಿಮರ್ಶೆಯ ಯಜಮಾನಿಕೆ ಒಡೆಯಬೇಕು. ಈ ಬಗ್ಗೆ ಉತ್ತರ ಹೇಳಲು ಕಷ್ಟ’ ಎಂದರು.
ಫೇಸ್‌ಬುಕ್‌ನಲ್ಲಿ ಬರೆಯವವರಿಗೆ ಅವರದೇ ಆದ ವರ್ಗ ಇದೆ. ಎಲ್ಲರೂ ಒಂದು ರೀತಿ ದ್ವೀಪಗಳಾಗಿ ಮಾರ್ಪಡುತ್ತಿದ್ದಾರೆ. ಆದರೆ ಕನ್ನಡದ ಮಟ್ಟಿಗೆ ಮುನ್ನುಡಿ-ಬೆನ್ನುಡಿಯಲ್ಲಿನ ಸೃಜನಶೀಲತೆಯ ಮಿಂಚು ಉತ್ತಮ ವಿಮರ್ಶೆ. ವಿಮರ್ಶೆಗೆ ಒಂದು ಪರಿಭಾಷೆ ಬೇಕಿದೆ. ಪಾರಿಭಾಷಿಕತೆ ಮೈಗೂಡಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದರು.
ಕನ್ನಡ ವಿಮರ್ಶೆ-ಬಿಕ್ಕಟ್ಟು ಹೇಗೆ ಪರಿಭಾವಿಸುವಿರಿ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಿಕ್ರಮ್ ವಿಸಾಜಿ, ಬೇರೆ ಬೇರೆ ಸಿದ್ಧಾಂತ ದೃಷ್ಟಿಕೋನ ನಿರಾಕರಿಸಲು ಆಗಲ್ಲ. ಕೃತಿಯ ಆಂತರ್ಯದ ತಿಳಿವಳಿಕೆ ಗಮನಿಸಬೇಕು. ನಾವು ಕೃತಿಯ ಆಂತರ್ಯದಿಂದ ದೂರ ಬಂದಿದ್ದೇವೆ ಅನ್ನಿಸುತ್ತದೆ. ಓದುಗರಿಗೂ ವಂಚನೆ ಅನ್ನೋ ಭಾವನೆ ಇದೆ. ಎಲ್ಲರ ವಿಮರ್ಶೆ ಆಲಿಸಬೇಕಿದೆ ಎಂದರು.
ವಿಮರ್ಶೆ ಮತ್ತು ಸೃಜನಶೀಲತೆ ಸಂಬಂಧ ಏನು? ಹೊಸ ತಲೆ ಮಾರು ವಿಮರ್ಶೆ ಹೇಗೆ ಗ್ರಹಿಸಲಿದೆ ಎಂಬ ಪ್ರಶ್ನೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಗೀತಾ ವಸಂತ್, ಸೃಜನಶೀಲತೆ ಒಂದು ಔಕಟ್ಟು, ಸಿದ್ಧಾಂತಕ್ಕೆ ಅನ್ವಯಿಸುವ ಗುಣ ಅಲ್ಲ. ಚೌಕಟ್ಟು ಮೀರಿ ನಡೆಯುವುದು ಸೃಜನಶೀಲತೆ. ಅದು ಕಾಲದಿಂದ ಕಾಲಕ್ಕೆ ಜ್ಞಾನ ವಿಸ್ತಾರ ಆಗಲಿದೆ. ಹಾಗೆಯೇ ಕೃತಿ ಗಟ್ಟಿಯಾಗಿದ್ದಾಗ ವಿಮರ್ಶೆಯ ದಾರಿ ವಿಸ್ತಾರ ಆಗುತ್ತದೆ. ಸೃಜನಶೀಲತೆ ಮತ್ತು ವಿಮರ್ಶೆ ಒಂದಕ್ಕೊಂದು ಪೂರಕ ಎಂದರು.
ವಿಕ್ರಮ್ ವಿಸಾಜಿ ಅವರ ಮಾತಿಗೆ ದನಿಗೂಡಿಸಿದ ತಾರಿಣಿ, ವಿಮರ್ಶೆಗೆ ಪೂರಕವಾಗಿ ಮೀಮಾಂಸೆ ಎಷ್ಟರ ಮಟ್ಟಿಗೆ ಬೆರೆಸಿಕೊಂಡಿದ್ದೇವೆ ಎಂಬುದು ದೊಡ್ಡ ಪ್ರಶ್ನೆ ಎಂದರು.
ವಿಮರ್ಶೆ ಓದುಗರು, ಲೇಖಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬ ಸತ್ಯನಾರಾಯಣ ಅವರ ಪ್ರಶ್ನೆಗೆ ದನಿಗೂಡಿಸಿದ ಚ.ಹ. ರಘುನಾಥ್, ವಿಮರ್ಶೆ ಪರಿಣಾಮ ಬೀರಬೇಕು ಎಂಬುದರ ಮೇಲೆ ತಕರಾರು ಇಲ್ಲ. ಪುಸ್ತಕ ವಿಮರ್ಶೆ ಪತ್ರಿಕೆಗಳಲ್ಲಿ ಬರಬೇಕು ಎಂಬ ಅಪೇಕ್ಷೆಗೆ ಇದು ಕಾಲ ಅಲ್ಲ. ಯುವಕರು ಗಮನಸುತ್ತಿಲ್ಲ ಎಂಬುದು ಸುಳ್ಳು. ಇದು ವೈಯಕ್ತಿಕ ರೋದನ ಅಷ್ಟೆ. ವೈಯಕ್ತಿಕ ದೂರನ್ನು ಸಮುದಾಯದ ಆರೋಪಗಳಾಗಿ ಮಾಡುವುದು ಸರಿಯಲ್ಲ ಎಂದರು.
ವಿಮರ್ಶಕರಾದ ಡಾ. ಎಚ್.ಎಸ್. ಸತ್ಯನಾರಾಯಣ, ತಾರಿಣಿ ಶುಭದಾಯಿನಿ, ಚ.ಹ. ರಘುನಾಥ್, ಗೀತಾ ವಸಂತ್ ಮತ್ತು ವಿಕ್ರಮ್ ವಿಸಾಜಿ ಭಾಗವಹಿಸಿದ್ದರು.