ಕೋಲಾರ: ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ಓದುಗರ ಅನುಭವಕ್ಕೆ ಬರುವ ಸಾಹಿತ್ಯಗಳು ಹೆಚ್ಚು ಘನತೆಯುಳ್ಳದ್ದಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಮನ್ವಂತರ ಪ್ರಕಾಶನ, ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕವಿ, ಲೇಖಕ, ಪತ್ರಕರ್ತ ಆರ್.ಚೌಡರೆಡ್ಡಿ ಪಣಸಮಾಕನಹಳ್ಳಿ ಅವರಿಗೆ ಕವಿ ನಮನ-2020 ಕಾರ್ಯಕ್ರಮವನ್ನು ಕರೊನಾ ವಾರಿಯರ್ಸ್‌ಗೆ ಪುಷ್ಪವೃಷ್ಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನುಷ್ಯವೇಗದ ವಿಮರ್ಶೆ ಮಾಡಿ ನೋಡುವ ಕಾಲಘಟ್ಟದಲ್ಲಿ ನಾವಿಂದು ಅಂತಹ ಸಾಹಿತ್ಯ, ಸಾಹಿತಿಯನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದರು. ಓದುಗರ ಬಾಯಲ್ಲಿ, ಅನುಭವದಲ್ಲಿ ಕವಿ, ಬರಹಗಾರರಿರಬೇಕು. ಕೃತಿ, ಸಾಹಿತ್ಯಕ್ಕೆ ಜೀವನದ ದಾರಿದೀಪವಾಗುವ, ಜೀವನ ಬದಲಿಸುವ ಸಾಮರ್ಥ್ಯವಿದ್ದರೆ ಅಂತಹ ಕೃತಿಗಳು ಜನಪ್ರಿಯತೆ ಪಡೆಯುತ್ತವೆ ಎಂದರು.
ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ದೊಂಬಿ, ಗಲಾಟೆಗೆ ಮಾಧ್ಯಮಗಳು ನೀಡುವಷ್ಟು ಮಾನ್ಯತೆ ಸಾಹಿತ್ಯಕ್ಕೆ ನೀಡುತ್ತಿಲ್ಲ. ಗ್ರಾಮೀಣ ಸೊಗಡನ್ನು ಯುವಜನತೆ ಮರೆಯುತ್ತಿರುವ ಸಂದರ್ಭದಲ್ಲಿ ಚೌಡರೆಡ್ಡಿ ಗ್ರಾಮೀಣ ಕೆರೆ, ಕಣಿ, ಬೆಳೆ, ಕೃಷಿಯ ಜಾನಪದ ಸೊಗಡು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಸ.ರಘುನಾಥ್, ಇಂದು ಲೇಖಕರ ಕೃತಿಯ ಬಗ್ಗೆ ಮಾತನಾಡಲೂ ಕೂಲಿ ಪಡೆಯುವ ಬುದ್ಧಿಜೀವಿಗಳಿದ್ದಾರೆ. ಕೂಲಿ ಬರಹಗಾರರೇ ಹೆಚ್ಚುತ್ತಿರುವ ದಿನಗಳಲ್ಲಿ ಕೂಲಿ ಕೇಳದೆ ಸಾಹಿತಿಯನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮನ್ವಂತರ ಟ್ರಸ್ಟ್ ಮಾಡಿದೆ. ನಿರ್ಮಲ ಮನಸ್ಸಿನ ಚೌಡರೆಡ್ಡಿಗೆ ಕವಿನಮನ ಅರ್ಥಪೂರ್ಣ ಎಂದರು.
ಗಾಂಧಿ, ಅಂಬೇಡ್ಕರ್ ಅವರನ್ನು ಅರ್ಥೈಸಿಕೊಳ್ಳಬೇಕಾದರೆ ಬಸವಣ್ಣನನ್ನು ಓದಬೇಕು ಎಂದರು. ನಾ ಕಂಡಂತೆ ಚೌಡರೆಡ್ಡಿ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕವಯತ್ರಿ ಮಾಯಾ ಬಾಲಚಂದ್ರ, ಚೌಡರೆಡ್ಡಿ ಅವರದ್ದು ಮಾರ್ಗದರ್ಶಿ ವ್ಯಕ್ತಿತ್ವ, ಸ್ಥಿತಪ್ರಜ್ಞೆ ಕಂಡಿದ್ದೇನೆ. ಬಂದಿದ್ದನ್ನು ಬಂದಹಾಗೆ ಸ್ವೀಕರಿಸುವ ವ್ಯಕ್ತಿತ್ವ, ಅವರ ಕವಿತೆ, ಲೇಖನಗಳು ಓದುಗರನ್ನು ಸರಳವಾಗಿ ಓದಿಸಿ ಮನಸ್ಸಿಗೆ ಇಳಿಸುತ್ತವೆ ಎಂದರು.
ರೈತಪರ ಹೋರಾಟಗಾರ್ತಿ ಎ.ನಳಿನಿ, ಜನಪರ ಹೋರಾಟಗಾರ್ತಿ ವಿ.ಗೀತಾ, ನಿವೃತ್ತ ಮುಖ್ಯಶಿಕ್ಷಿಕ ಸಿ.ಬೈರಪ್ಪ, ನಿವೃತ್ತ ಶಿಕ್ಷಕ ಕೆ.ಎನ್.ಪರಮೇಶ್ವರನ್ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಮಾಲೂರಿನ ಸಾಹಿತಿ ದೊಡ್ಡಕಲ್ಲಳ್ಳಿ ಎಂ. ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಯು.ವಿ ನಾರಾಯಣಾಚಾರ್, ತಿಪ್ಪೇರಂಗಪ್ಪ, ಚಿಕ್ಕಕುಂತೂರು ಚಂದ್ರಪ್ಪ, ನಾ.ವೆಂಕಿ, ಶಂಕರೇಗೌಡ, ಪಿ.ವಿ. ಶ್ರೀನಿವಾಸ್, ಜಿ.ಸುಧಾಕರ್, ಡಿ.ರಾಜೇಶ್ವರಿ, ಎನ್.ಸಿ.ರಾಜೇಶ್ವರಿ, ವಿ.ರಾಧಾಕೃಷ್ಣ, ಲಕ್ಕೂರು ಎಂ.ನಾಗರಾಜ್, ಎಚ್.ಎಸ್.ಪುಷ್ಪಲತಾ ಕವನ ವಾಚಿಸಿದರು. ಕವಿಗೋಷ್ಠಿ ಸಂಚಾಲಕರಾದ ಟಿ. ಸುಬ್ಬರಾಮಯ್ಯ, ಡಾ.ಶರಣಪ್ಪ ಗಬ್ಬೂರು, ಸಿ.ರವೀಂದ್ರಸಿಂಗ್ ಉಪಸ್ಥಿತರಿದ್ದರು. ಶ್ರೀನಿವಾಸಪುರ ಗಾಯಕ ನರಸಿಂಹಮೂರ್ತಿ ಮತ್ತು ತಂಡದಿಂದ ಆರ್.ಚೌಡರೆಡ್ಡಿ ವಿರಚಿತ ಗೀತೆಗಳ ಗಾಯನ ನಡೆಯಿತು.
ಸಮಾರೋಪ ನುಡಿಗಳನ್ನಾಡಿದ ಉಪನ್ಯಾಸಕ ಡಾ.ಡಿ.ಎಸ್.ಶ್ರೀನಿವಾಸಪ್ರಸಾದ್, ಕವಿಯೊಳಗೆ ದೇಸಿತನ ಹಾಗೂ ತನ್ನತನ ಉಳಿಸಿಕೊಂಡವರು ಚೌಡರೆಡ್ಡಿ. ಈ ನೆಲದ ಬೇರು ಅವರ ಕವಿತೆ, ಲೇಖನಗಳಲ್ಲಿ ಉಸಿರಾಡುತ್ತಿದೆ. ಹೃದಯಕ್ಕೆ ಹತ್ತಿರವಾಗುವ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಇಂತಹವರನ್ನು ಪ್ರಧಾನಧಾರೆಯಲ್ಲಿ ಗುರುತಿಸುವ ಕೆಲಸವಾಗಬೇಕು ಎಂದರು.
ಗೌರವ ಕವಿಗಳಿಗೆ ಅರ್ಪಣೆ: ಕವಿ ನಮನ ಕವಿ ಸಮುದಾಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಕವಿನಮನ ಗೌರವವನ್ನು ಕವಿಗಳಿಗೆ ಸಮರ್ಪಿಸುತ್ತೇನೆ ಕವಿನಮನ ಗೌರವ ಸ್ವೀಕರಿಸಿದ ನಂತರ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಬರೆದ ಕವಿತೆ, ಸಾಹಿತ್ಯಗಳನ್ನು ಎಲ್ಲರೂ ಓದುತ್ತಿರುವುದನ್ನು ಕಂಡಾಗ ಬರೆದಿದ್ದಕ್ಕೆ ಮೌಲ್ಯವಿದೆ ಎಂದೆನಿಸಿದೆ. ಇನ್ನಷ್ಟು ಕವಿತೆ, ಸಾಹಿತ್ಯದ ಬರವಣಿಗೆಯಲ್ಲಿ ತೊಡಗುವೆ ಎಂದು ಲೇಖಕ ಆರ್.ಚೌಡರೆಡ್ಡಿ ಪಣಸಮಾಕನಹಳ್ಳಿ ನುಡಿದರು.
ಎಲ್ಲರೊಡನೆ ಸೇರುವ ಸಾಹಿತ್ಯ ಜೀವಂತಿಕೆಯಿರುತ್ತದೆ. ಆರ್.ಚೌಡರೆಡ್ಡಿ ಅವರ ಕವಿ, ಲೇಖನಗಳಿಗೆ ಆ ಶಕ್ತಿ ಇದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆಯೂ ಅವರಿಗೆ. ಮುಂದಿನ ದಿನಗಳಲ್ಲಿ ಸಮ್ಮೇಳನಗಳಲ್ಲಿ ಅವರ ಲೇಖನಗಳನ್ನು ಹೊರಗೆ ತರುವ ಕೆಲಸ ಮಾಡೋಣ. ನಾಗಾನಂದ ಕೆಂಪರಾಜ್, ಕಸಾಪ ಜಿಲ್ಲಾಧ್ಯಕ್ಷ