ಜಿಲ್ಲೆ

ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ದೂರು: ಎನ್.ಆರ್.ಸಂತೋಷ್

ಹಾಸನ: ಅರಸೀಕೆರೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ವಿಪ್ ಉಲ್ಲಂಘನೆ ಮಾಡಿದ್ದು, ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಜತೆಗೆ ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಎಚ್ಚರಿಕೆ ನೀಡಿದರು.
ಜೆಡಿಎಸ್ ಚಿಹ್ನೆಯಡಿ ಗೆದ್ದಿದ್ದ ಸದಸ್ಯರು ಪಕ್ಷದ ಸೂಚನೆಗೆ ವಿರುದ್ಧವಾಗಿ ಮತ ಹಾಕಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಇತರೆ ನಾಯಕರಿಗೆ ಮೋಸ ಮಾಡಿದ್ದಾರೆ. ಶಾಸಕ ಕೆ.ಎಂ. ಶಿವಲಿಂಗೇಗೌಡರು, ಕಾಂಗ್ರೆಸ್‌ಗೆ ಹೋಗುವಾಗ ಗ್ರಾಪಂ, ನಗರಸಭೆ ಸದಸ್ಯರು ಸೇರಿ ಶೇ.95 ಮಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ನಗರಸಭೆ ಚುನಾವಣೆ ಹಿನ್ನೆಲೆ ನಾವು ವಿಪ್ ಜಾರಿ ಮಾಡಿದ್ದೆವು. ಮಾತ್ರವಲ್ಲ ಆ.15ರಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ದೇಶನದಂತೆ ಎಚ್.ಡಿ. ರೇವಣ್ಣ ಅವರ ಸಲಹೆ ಸೂಚನೆ ಆಧರಿಸಿ ಸಭೆ ನಡೆಸಿ ಎಲ್ಲ ಸದಸ್ಯರನ್ನು ಆಹ್ವಾನಿಸಿದ್ದೆವು. ಯಾರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಸಲಹೆ ಕೊಡಿ ಎಂದು ಕೋರಿದ್ದೆವು. ದೂರವಾಣಿ ಕರೆ ಮಾಡಿದರೂ ಬಹುತೇಕ ಮಂದಿ ಸಭೆಗೆ ಗೈರು ಹಾಜರಾದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮೊದಲಾದವರು ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ರಮೇಶ್ ಅವರನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅಭಿರಾಮಿ ಎಂಬುವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದ್ದರು. ಆದರೆ ಗುರುವಾರ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದವರು ವಿಪ್ ಉಲ್ಲಂಘನೆ ಮಾಡಿ, ಶಿವಲಿಂಗೇಗೌಡರ ಅಣತಿಯಂತೆ ಜೆಡಿಎಸ್ ಚಿಹ್ನೆಯಡಿ ಗೆದ್ದವರು ತಮ್ಮ ಮತವನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು.
ವಿಪ್ ಉಲ್ಲಂಘಿಸಿದ ನಗರಸಭೆ ಜೆಡಿಎಸ್ ಸದಸ್ಯರ ಸದಸ್ಯತ್ವ ಅನರ್ಹ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಅಷ್ಟೇ ಅಲ್ಲ, ಕಾನೂನು ಹೋರಾಟ ಸಹ ಮಾಡಲಾಗುವುದು. ಜನಮತಕ್ಕೆ ವಿರುದ್ಧವಾಗಿ ಮತ ಮಾರಾಟ ಮಾಡಿಕೊಳ್ಳುವ ಮೂಲಕ ಅಷ್ಟೂ ಮಂದಿ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.
ಇದೇ ವೇಳೆ ಜೆಡಿಎಸ್ ಸದಸ್ಯ ಈಶ್ವರಪ್ಪ ಚುನಾವಣೆ ದಿನವೇ ದಿಢೀರ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್, ಅವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಸುಜಾತಾ ರಮೇಶ್ ಅವರಿಗೆ ಅವಕಾಶ ನೀಡಿದ್ದಕ್ಕೆ ಹೀಗೆ ಮಾಡಿದ್ದಾರೆ. ಪಕ್ಷದಿಂದ ಅವರಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಈಗಲೂ ರಾಜೀನಾಮೆ ನಿರ್ಧಾರ ಬದಲಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಅಭಿರಾಮಿ, ಸುಜಾತಾ ರಮೇಶ್, ಪಕ್ಷೇತರ ಅಭ್ಯರ್ಥಿ ನೀಲಗಿರಿ ಗೌಡ, ಶಿವಣ್ಣ ರಾಜ್ ಇದ್ದರು.