ಮೈಸೂರು: ವಿಪತ್ತು ನಿರ್ವಹಣೆ ಪರಿಹಾರ ವಿತರಣೆಯಲ್ಲಿಯೂ ಅಕ್ರಮ ಆಗುತ್ತಿದ್ದು, ಅನರ್ಹರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಎಚ್ಚರಿಕೆ ನೀಡಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬರ, ಪ್ರವಾಹ ಹಾಗೂ ಕೋವಿಡ್‌ಗೆ ಸಂಬಂಧಿಸಿದಂತೆ ವಿಪತ್ತು ಪರಿಹಾರ ನಿಧಿ (ಕೆಲಾಮಿಟಿ ಫಂಡ್)ಯಲ್ಲಿ ಕೈಗೊಂಡಿರುವ ಕಾಮಗಾರಿಗಳು 4 ವರ್ಷಗಳಿಂದ ಬಾಕಿ ಉಳಿದಿವೆ. ಅದೇ ವರ್ಷಗಳಲ್ಲಿ ಕಾಮಗಾರಿಗಳು ಮುಗಿಯಬೇಕು. ಕೆಲವು ಕಡೆ ವಿಪತ್ತು ಪರಿಹಾರ ನಿಧಿ ವಿತರಣೆಯಲ್ಲಿಯೂ ಅಕ್ರಮ ನಡೆದಿದ್ದು, ಉಳ್ಳವರಿಗೆ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭೂಮಿ ತಂತ್ರಾಂಶದಲ್ಲಿ ಬರುವ ಕಡತಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಸಕಾಲದಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿಳಂಬಕ್ಕೆ ಕಾರಣವಾದ ತಹಸೀಲ್ದಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ಹಲವಾರು ಕೆಲಸಗಳು, ಸೌಲಭ್ಯಗಳಿಗೆ ಕಂದಾಯ ಇಲಾಖೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇವರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು. ಆಡಳಿತ ವರ್ಗ ಚುರುಕಾಗಿ ಕಾರ್ಯನಿರ್ವಹಿಸಿ, ಜನಸ್ನೇಹಿ ಆಡಳಿತ ನೀಡಿ ಸರ್ಕಾರಕ್ಕೆ ಉತ್ತಮ ಹೆಸರು ತರುವ ಮೂಲಕ ಜನರ ನಿರೀಕ್ಷೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲಿ ಇರುವ ಕೋರ್ಟ್ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳಬಾರದು. ವಾರದಲ್ಲಿ 2 ದಿನ ಕೋರ್ಟ್ ತೆಗೆದುಕೊಂಡು ಆದ್ಯತೆಯ ಮೇಲೆ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮಾತನಾಡಿ, ಪದೇ ಪದೆ ಪ್ರವಾಹ ಬಂದು ಅಪಾಯ ಉಂಟಾಗುವ ಊರುಗಳನ್ನು ಸ್ಥಳಾಂತರ ಮಾಡಿ ಶಾಶ್ವತವಾಗಿ ಪುನರ್ವಸತಿ ಕಲ್ಪಿಸುವ ಕ್ರಮವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು. ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗಬೇಕು ಎಂದರು.
ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ.ಮಹೇಶ್ ಮಾತನಾಡಿ, ಇಲ್ಲಿಯವರೆಗೆ ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಆಗುವ ಮಾಹಿತಿ ಇದೆ. ಮಳೆ ಅನಾಹುತಗಳಿಗೆ ಎಸ್‌ಡಿಆರ್‌ಎಫ್ ಅನುದಾನದಲ್ಲಿ ಪರಿಹಾರಗಳನ್ನು ವಿತರಣೆ ಮಾಡಬೇಕು. ಪಿಡಿ ಅಕೌಂಟ್ ಅನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮಾತನಾಡಿ, ಕೆಆರ್‌ಎಸ್, ಕಬಿನಿ, ನುಗು ಮತ್ತು ತಾರಕ ಜಲಾಶಯಗಳಿಂದ ಕುಡಿಯುವ ನೀರನ್ನು ಬಳಕೆ ಮಾಡಲಾಗುತ್ತಿದೆ. ರೈತರ ಬೆಳೆಗಳಿಗೆ ನೀರನ್ನು ಈಗಿನ ಪರಿಸ್ಥಿತಿಯಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತರು ರಾಗಿ, ಜೋಳದಂತಹ ಒಣ ಬೆಳೆಗಳನ್ನು ಬೆಳೆಯುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾದೇಶಿಕ ಆಯುಕ್ತ ಪ್ರಕಾಶ್, ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್, ಭೂಮಾಪನಾ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್, ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಇತರರು ಇದ್ದರು.
ಶೇ.30 ರಷ್ಟು ಮಳೆ ಕೊರತೆ
ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.30 ರಷ್ಟು ಮಳೆ ಕೊರತೆ ಆಗಿದೆ. ಮುಂದೆಯೂ ಮಳೆ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ರೈತರು ಹೆಚ್ಚಿನ ನೀರನ್ನು ಬಳಸುವ ಬೆಳೆಗಳನ್ನು ಬೆಳೆಯಬಾರದು ಎಂದು ಸಚಿವ ಕೃಷ್ಣ ಭೈರೇಗೌಡ ಸಲಹೆ ಮಾಡಿದರು.
ಮಳೆಯಿಂದ ಜೀವಹಾನಿ ಆಗಿದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯದ ಸ್ಥಳದಲ್ಲಿ ಇರುವವರನ್ನು ಸ್ಥಳಾಂತರಿಸಿ ಪ್ರಾಣಹಾನಿ ಆಗದಂತೆ ತಡೆಗಟ್ಟಬೇಕು. ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕಾಲು ಸಂಕಗಳು ಹಾಗೂ ವೆಂಟೆಡ್ ಡ್ಯಾಮ್‌ಗಳನ್ನು ನಿರ್ಮಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.