ಯಾದಗಿರಿ: ಪ್ರಕೃತಿ ವಿಕೋಪ ಸೇರಿ, ವಿಪತ್ತುಗಳು ಎದುರಾದ ವೇಳೆ ಅದನ್ನು ಎದುರಿಸಲು ತಾಳ್ಮೆ ಹಾಗೂ ಅಕಾರಿ ವರ್ಗದಲ್ಲಿ ಪರಸ್ಪರ ಸಮನ್ವಯತೆ ಇರಬೇಕು ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಸಲಹೆ ನೀಡಿದರು.
ಇಲ್ಲಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಮತ್ತು ಮೈಸೂರು ವಿಕೋಪ ನಿರ್ವಹಣಾ ಮತ್ತು ಆಡಳಿತ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಅಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ, ಪರಿಷ್ಕರಣೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಅವಘಡಗಳಂಥ ಸಂದರ್ಭದಲ್ಲಿ ಅಕಾರಿಗಳು ತಂಡವಾಗಿ ಕಾರ್ಯತಂತ್ರ ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಯಾವುದೇ ರೀತಿಯ ವಿಕೋಪಗಳು ಎದುರಾದರೂ ಯಶಸ್ವಿಯಾಗಿ ನಿಭಾಯಿಸಬಹುದು ಎಂದರು.
ಯಾವುದೇ ವಿಕೋಪಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಇಲಾಖೆಗಳು ತಂಡದಂತೆ ಯೋಜನೆ ರೂಪಿಸಿ, ಅದರಂತೆ ಕಾರ್ಯಪ್ರವೃತ್ತರಾದಾಗ ಮಾತ್ರ ಯಶಸ್ವಿಯಾಗಿ ಎದುರಿಸಲು ಸಾಧ್ಯ. ಈ ಕಾರ್ಯಗಾರಕ್ಕೆ ನಿಜವಾದ ಅರ್ಥ ಬರಬೇಕಾದರೆ ಅಕಾರಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು. ತಮ್ಮಲ್ಲಿನ ಉಪಯುಕ್ತ ವಿಚಾರ, ಮಾರ್ಗಸೂಚಿ ಹಾಗೂ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಇತರರ ಹೊಸ ವಿಚಾರಗಳನ್ನು ಕಲಿತುಕೊಳ್ಳಬೇಕು. ಆ ಮೂಲಕ ಒಗ್ಗಟ್ಟಿನ ಪ್ರದರ್ಶನ ನೀಡಬೇಕು ಎಂದು ಹೇಳಿದರು.