ಜಿಲ್ಲೆ

ವಿಪತ್ತು ನಿರ್ವಹಣೆಗೆ ವೈಜ್ಞಾನಿಕ ತರಬೇತಿ ಅಗತ್ಯ

ಹೊನ್ನಾವರ: ವಿಪತ್ತು ನಿರ್ವಹಣೆಗಾಗಿ ಸ್ವಯಂಸೇವಕರ ತಂಡಗಳನ್ನು ರಚಿಸಿ ವೈಜ್ಞಾನಿಕವಾಗಿ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯಸ್ ಹೇಳಿದರು.

ತಾಲೂಕಿನ ರ್ಕ ಜ್ಞಾನೇಶ್ವರಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಪತ್ತು ನಿರ್ವಹಣೆ ಸ್ವಯಂಸೇವಕರಿಗೆ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಸೀಲ್ದಾರ್ ವಿವೇಕ ಶೇಣ್ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸೂಕ್ತ ತರಬೇತಿ ಪಡೆದಾಗ ಮಾತ್ರ ಸ್ವಯಂಸೇವಕರು ಸಂಕಷ್ಟದ ಸಂದರ್ಭಗಳಲ್ಲಿ ಉತ್ತಮ ರೀತಿಯ ಸೇವೆ ನೀಡಲು ಸಹಕಾರಿಯಾಗುತ್ತದೆ. ಸ್ಥಳೀಯವಾಗಿ ಅನುಭವ ಇರುವುದರಿಂದ ಪ್ರವಾಹ ಭೀತಿಯಿಂದ ಹಾನಿ ಸಂಭವಿಸುವುದನ್ನು ತಡೆಯಬಹುದು’ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸತೀಶ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ವಸಂತ ಆಚಾರಿ, ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ, ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ, ಯೋಜನಾಧಿಕಾರಿ ಎಂ.ಎಸ್. ಈಶ್ವರ, ಜನಜಾಗೃತಿ ವೇದಿಕೆ ಸದಸ್ಯರಾದ ಶಿವರಾಜ ಮೇಸ್ತ, ವಾಮನ ನಾಯ್ಕ, ರಾಮಚಂದ್ರ ನಾಯ್ಕ ಇತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರವಾಹ ಬಂದಾಗ ಕಾರ್ಯನಿರ್ವಹಿಸಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.