ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ವಿಶ್ವ ವಾನರ ದಿನ ಆಚರಿಸಲಾಯಿತು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮವನ್ನು ಉದ್ಘಾಟಿಸಿ ತಾವೇ ಸೆರೆಹಿಡಿದ ವಾನರ ಛಾಯಾಚಿತ್ರವನ್ನು ಪ್ರದರ್ಶಿಸಿ ಮಾತನಾಡಿದರು. ಭಾರತದಲ್ಲಿ 19 ಬಗೆಯ ಕೋತಿಗಳು ಕಂಡುಬರುತ್ತಿದ್ದು ಅವುಗಳಲ್ಲಿ ದಕ್ಷಿಣ ಭಾರತದಲ್ಲಿ ಅಪರೂಪದ ಸಿಂಗಳೀಕ, ನೀಲಗಿರಿ ಲಂಗೂರ ಹಾಗೂ ಕಾಡು ಪಾಪಗಳಿದ್ದು ಇವು ವಿನಾಶದಂಚಿನಲ್ಲಿವೆ ಎಂದು ಹೇಳಿದರು.
ಕರ್ನಾಟಕದ ಶಿವಮೊಗ್ಗ ಬಳಿ ಸೋಮೇಶ್ವರ ವನ್ಯಜೀವಿ ಧಾಮವನ್ನು ಸಿಂಗಳೀಕ ವನ್ಯಜೀವಿ ಧಾಮ ಎಂದು ಘೋಷಿಸಲಾಗಿದೆ. ಅಸ್ಸಾಂನಲ್ಲಿ ಹೂಲಾಕ್ ಗಿಬ್ಬನ್ ಎಂಬ ಏಕೈಕ ಏಪ್ ಪ್ರಭೇದ ಕಂಡುಬರುತ್ತವೆ. ಇವು ತೀರಾ ವಿನಾಶದಂಚಿನಲ್ಲಿದ್ದು ಇದರ ಸಂರಕ್ಷಣೆಗೆ ಹೆಚ್ಚು ಗಮನಹರಿಸುವ ಅವಶ್ಯಕತೆ ಇದೆ. ಮಾನವ ಇಂದು ಆರೋಗ್ಯಕರವಾಗಿರಲು ಕೋತಿಗಳು ಕಾರಣ. ಅವುಗಳನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸುವುದರಿಂದ ಚಿತ್ರ ಹಿಂಸೆ ಅನುಭವಿಸುತ್ತಿವೆ. ಕ್ಯಾನ್ಸರ್, ಏಡ್ಸ್, ಕರೊನಾ ಲಸಿಕೆಗಳ ಪ್ರಯೋಗಕ್ಕೆ ತಮ್ಮ ಜೀವ ತೆತ್ತ ಉದಾಹರಣೆಗಳಿವೆ ಎಂದು ವಿವರಿಸಿದರು.
ಶಿಕ್ಷಕ ನಂಜುಂಡಸ್ವಾಮಿ, ವಿದ್ಯಾರ್ಥಿಗಳು ಇದ್ದರು.