ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದ 4 ವಾರ್ಡ್‌ಗಳಲ್ಲಿ ಸೀಲ್‌ಡೌನ್ ಮುಂದುವರಿಯಲಿದ್ದು ಉಳಿದೆಡೆ ಷರತ್ತುಗಳಿಗೊಳಪಟ್ಟ ವಿನಾಯಿತಿಯ ಲಾಕ್‌ಡೌನ್ ಅನುಷ್ಠಾನಗೊಳಿಸಲಾಗುತ್ತಿದೆ.
ಕಂಟೈನ್‌ಮೆಂಟ್ ಜೋನ್‌ಗಳಾದ ಚಿಕ್ಕಬಳ್ಳಾಪುರ ನಗರದ 10, 12, 13 ಮತ್ತು 17ನೇ ವಾರ್ಡ್‌ಗಳಲ್ಲಿ ಜನ ಮತ್ತು ವಾಹನ ಓಡಾಟ, ವಹಿವಾಟು ಸೇರಿ ಎಲ್ಲ ಚಟುವಟಿಕೆಗೂ ನಿರ್ಬಂಧ ಹೇರಲಾಗಿದೆ. ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
ಜಿಲ್ಲೆಯಲ್ಲೇ ಮೊದಲ ಪ್ರಕರಣ ಪತ್ತೆಯಾದ ಗೌರಿಬಿದನೂರಿನಲ್ಲಿ ಸೀಲ್‌ಡೌನ್ ಅನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಉಳಿದ ಭಾಗಗಳಲ್ಲಿ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಮೇ 17ರವರೆಗೆ ಕೆಲ ವಿನಾಯಿತಿಯೊಂದಿಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಅಗತ್ಯ ಸೇವೆಯ ಅವಧಿ : ಚಿಕ್ಕಬಳ್ಳಾಪುರ ನಗರದಲ್ಲಿ ದಿನಸಿ, ಬಟ್ಟೆ, ಮದ್ಯದ ಅಂಗಡಿಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 7 ರಿಂದ ರಾತ್ರಿ 7 ರವರೆಗೆ ಮದ್ಯ ಮಾರಬಹುದು. ಬೃಹತ್ ಮಳಿಗೆ, ಸಿನಿಮಾ ಮಂದಿರ, ಧಾರ್ಮಿಕ ಕೇಂದ್ರ ಕಾರ್ಯಾರಂಭಕ್ಕೆ ಅವಕಾಶವಿಲ್ಲ.
ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೇಂದ್ರ ಸರ್ಕಾರದ ಕಿತ್ತಳೆ ವಲಯ ಮತ್ತು ರಾಜ್ಯ ಸರ್ಕಾರ ಕೆಂಪು ವಲಯ ಎಂದು ಗುರುತಿಸಿದ್ದು ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಸಡಿಲಿಗೊಳಿಸಲಾಗುತ್ತದೆ.