ಜಿಲ್ಲೆ

ವಿನಾಯಿತಿ ನೀಡದಿದ್ದಲ್ಲಿ ಕೋರ್ಟ್​ಗೆ

ಕಾರವಾರ: ಸ್ಥಳೀಯ ವಾಹನಗಳಿಗೆ ಹಟ್ಟಿಕೇರಿ ಟೋಲ್ ಗೇಟ್​ನಲ್ಲಿ ಶುಲ್ಕ ನಲ್ಲಿ ವಿನಾಯಿತಿ ನೀಡಬೇಕು ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮಾಜಿ ಶಾಸಕ ಸತೀಶ ಸೈಲ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಾಳಿಯಿಂದ ಅಂಕೋಲಾವರೆಗೆ ಶೇ. 50 ರಷ್ಟೂ ಚತುಷ್ಪಥ ಕಾಮಗಾರಿ ಮುಗಿದಿಲ್ಲ. ಕಾರವಾರ ನಗರದಲ್ಲಿ ಫ್ಲೈ ಓವರ್, ಲಂಡನ್ ಬ್ರಿಜ್ ನಿರ್ಮಾಣ ಆಗಿಲ್ಲ. ಸುರಂಗ ಸಂಚಾರಕ್ಕೆ ತೆರೆದುಕೊಂಡಿಲ್ಲ. ಬಿಣಗಾ, ಅರಗಾ, ಚೆಂಡಿಯಾ, ಅಮದಳ್ಳಿ, ಮುದಗಾ ಘಟ್ಟ ಹೀಗೆ ವಿವಿಧೆಡೆ ಕಾಮಗಾರಿ ನಡೆದಿದೆ.

ಹೀಗಿರುವಾಗ ಸ್ಥಳೀಯ ಕೆಎ 30 ಮತ್ತು 47 ನೋಂದಣಿ ಹೊಂದಿರುವ ವಾಹನಗಳಿಗೆ ಶುಲ್ಕ ವಸೂಲಿ ನ್ಯಾಯ ಸಮ್ಮತವಲ್ಲ. ಈ ನಿಟ್ಟಿನಲ್ಲಿ ಚರ್ಚೆ ನಡೆಸುವಂತೆ ಕುಮಟಾ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಅಷ್ಟರಲ್ಲಿ ಶಾಸಕಿ ರೂಪಾಲಿ ನಾಯ್ಕ, ಟೋಲ್ ಶುಲ್ಕ ವಸೂಲಿಗೆ ಸ್ಥಳೀಯ ವಾಹನಗಳಿಗೆ ರಿಯಾಯಿತಿ ಕೊಡಿಸಿದ್ದಾಗಿ ಪ್ರಚಾರ ಮಾಡಿದರು. ನಮಗೆ ರಿಯಾಯಿತಿ ಬೇಡ, ಸ್ಥಳೀಯ ವಾಹನಗಳಿಗೆ ಶುಲ್ಕ ವಸೂಲಿಯಿಂದಲೇ ಸಂಪೂರ್ಣ ವಿನಾಯಿತಿ ನೀಡಿ. ಇಲ್ಲವೇ ಟೋಲ್ ಗೇಟ್ ಬಂದ್ ಮಾಡಿ ಎಂದು ಸೋಮವಾರ ಹಟ್ಟಿಕೇರಿ ಐಆರ್​ಬಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಾದ ಮಂಡಿಸಿದ್ದೇನೆ. ಬಿಳಿಯ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳಿಗೆ ವಿನಾಯಿತಿ ಹಾಗೂ ಹಳದಿ ಬೋರ್ಡ್ ವಾಹನಗಳಿಗೆ ರಿಯಾಯಿತಿ ನೀಡುವುದಾಗಿ ಐಆರ್​ಬಿ

ಅಧಿಕಾರಿಗಳು ಭರವಸೆ ನೀಡಿದರು. ಆದರೆ, ನಾವು ಅದಕ್ಕೆ ಒಪ್ಪಿಲ್ಲ. ನಮ್ಮ ಬೇಡಿಕೆಗೆ ಐಆರ್​ಬಿ ಅಧಿಕಾರಿಗಳು 10 ದಿನ ಕಾಲಾವಕಾಶ ಕೋರಿದ್ದಾರೆ. ನಂತರವೂ ವಿನಾಯಿತಿ ನೀಡದೇ ಇದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಮತ್ತು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.

ಅಪಘಾತ ಹೆಚ್ಚಳ: ಹೆದ್ದಾರಿ ತಿರುವು ಇರುವಲ್ಲಿ ಸರ್ವೀಸ್ ರಸ್ತೆ ನಿರ್ವಣವಾಗಿಲ್ಲ. ಜನವಸತಿ ಪ್ರದೇಶದಲ್ಲಿ ಲೈಟ್ ಅಳವಡಿಸಿಲ್ಲ. ಇದರಿಂದ ಅಪಘಾತಗಳು ಹೆಚ್ಚಿವೆ. ಅವರ್ಸಾದಲ್ಲಿ ಒಂದೇ ದಿನ ಮೂರು ಅಪಘಾತಗಳಾಗಿವೆ. ಸದಾಶಿವಗಡದಲ್ಲಿ ಅಪಘಾತದಿಂದ ಸಾವುಗಳು ಸಂಭವಿಸಿವೆ. ಈ ಕುರಿತು ಐಆರ್​ಬಿ ಗಮನ ಹರಿಸಬೇಕು ಎಂದರು. ಪ್ರಭಾಕರ ಮಾಳ್ಸೇಕರ್, ಶಂಭು ಶೆಟ್ಟಿ, ಮೋಹನ ನಾಯ್ಕ, ಮಾರುತಿ ನಾಯ್ಕ ಇದ್ದರು.

ಬಸ್ ದರ ಹೆಚ್ಚಳ ಸರಿಯಲ್ಲ: ಟೋಲ್ ಶುಲ್ಕದ ಕಾರಣ ನೀಡಿ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ಪ್ರಯಾಣದರವನ್ನು ಏಕರೂಪವಾಗಿ ಹೆಚ್ಚಿಸಿದ್ದು ಸರಿಯಲ್ಲ. ಟೋಲ್ ದಾಟುವ ಸಾಮಾನ್ಯ ಬಸ್​ಗಳಿಗೆ ಒಮ್ಮೆಗೆ ಒಬ್ಬ ವ್ಯಕ್ತಿಗೆ 9 ರೂ, ರಾಜಹಂಸ ಬಸ್​ಗೆ 10 ರೂ., ಐರಾವತಕ್ಕೆ 13 ರೂ. ಹೆಚ್ಚಿಸಲಾಗಿದೆ. ಬಾಳೆಗುಳಿಯಲ್ಲಿ ಹತ್ತಿ ಹಟ್ಟಿಕೇರಿಯಲ್ಲಿ ಇಳಿಯುವ ವ್ಯಕ್ತಿಯೂ 9 ರೂ. ಹೆಚ್ಚುವರಿ ಪಾವತಿಸಬೇಕು. ಸ್ಟೇಜ್ ಆಧಾರದ ಮೇಲೆ ಟಿಕೆಟ್ ಬೆಲೆ ಹೆಚ್ಚಿಸಬೇಕು. ಇಲ್ಲವೇ ಟೋಲ್ ಶುಲ್ಕ ವಿನಾಯಿತಿ ಇರುವ ಸ್ಥಳೀಯ ಬಸ್ ವ್ಯವಸ್ಥೆ ಮಾಡಬೇಕು ಎಂದು ಸೈಲ್ ಒತ್ತಾಯಿಸಿದರು.

ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ: ಟೋಲ್ ಶುಲ್ಕದ ನೆಪದಲ್ಲಿ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ಪ್ರಯಾಣ ದರ ಏಕರೂಪದಲ್ಲಿ ಹೆಚ್ಚಿಸಿರುವ ಕ್ರಮ ಸರಿಯಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಭೆ ನಡೆಸಿ ಪ್ರಯಾಣಿಕರಿಗೆ ಹೊರೆಯಾಗದಂತೆ ಕ್ರಮ ವಹಿಸಿ ಎಂದು ಎನ್​ಡಬ್ಲ್ಯುಕೆಆರ್​ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.