ಹುಬ್ಬಳ್ಳಿ: ಒಂದೆಡೆ ಹೆಚ್ಚುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಲಾಕ್ಡೌನ್ ಜಾರಿಗೊಳಿಸಿದೆ, ಮತ್ತೊಂದೆಡೆ ಲಾಕ್ಡೌನ್ಗೆ ಮುಂಚೆ ಅಗತ್ಯ ವಸ್ತು ಖರೀದಿಗಾಗಿ ನೀಡಿರುವ ವಿನಾಯಿತಿ ಅವಧಿಯಲ್ಲಿ ಜನರು ಪರಸ್ಪರ ಅಂತರವನ್ನೇ ಮರೆತು ಓಡಾಡುವುದು ಹೆಚ್ಚಾಗಿದೆ.
10 ದಿನಗಳ ಲಾಕ್ಡೌನ್ನ 2ನೇ ದಿನವಾದ ಗುರುವಾರ ಹುಬ್ಬಳ್ಳಿಯ ಸರಾಫಗಟ್ಟಿಯಲ್ಲಿ ಜನರು ಪರಸ್ಪರ ಅಂತರ ಮರೆತು ತರಕಾರಿ, ಹೂವು, ಹಣ್ಣು ಖರೀದಿಯಲ್ಲಿ ತೊಡಗಿದ್ದರು. ಮತ್ತೊಂದೆಡೆ ಕೇಶ್ವಾಪುರದಲ್ಲಿ ಮಾಂಸ ಮಾರಾಟದ ಅಂಗಡಿಯಲ್ಲಿ ಜನರು ಚಿಕನ್, ಮಟನ್, ಮೀನು ಖರೀದಿಗೆ ಮುಗಿಬಿದ್ದಿದ್ದರು.
ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ನೀಡಿರುವ ವಿನಾಯಿತಿ ಅವಧಿಯಲ್ಲಿ ಜನರು ಪರಸ್ಪರ ಅಂತರ ಮರೆತು, ಮಾಸ್ಕ್ ಹಾಕಿಕೊಳ್ಳದೆ ತಿರುಗುತ್ತಿರುವುದು ಬಹುತೇಕ ಪ್ರದೇಶಗಳಲ್ಲಿ ಕಂಡುಬಂದಿತು. ಸುರಿಯುತ್ತಿರುವ ಮಳೆ ಮಧ್ಯೆಯೂ ಚನ್ನಮ್ಮ ವೃತ್ತ, ಸ್ಟೇಶನ್ ರಸ್ತೆಗಳಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು.
ಮಿನಿ ವಿಧಾನಸೌಧ, ಮಹಾನಗರ ಪಾಲಿಕೆ ಸೇರಿ ಇತರ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಭೇಟಿ ವಿರಳವಾಗಿತ್ತು. ಮಳೆಯಿಂದಾಗಿ ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡುವ ಹೊರ ರೋಗಿಗಳ ಸಂಖ್ಯೆಯೂ ಇಳಿಮುಖಗೊಂಡಿತ್ತು.
ಜನತಾ ಬಜಾರ್ನಲ್ಲಿ ಗುರುವಾರವೂ ಬೆಳಗ್ಗೆ 11.30ರವರೆಗೆ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಎಂ.ಜಿ. ಮಾರ್ಕೆಟ್ನಲ್ಲಿ ಅಂಗಡಿಗಳು ಬಂದ್ ಇದ್ದರೂ, ಮಾರ್ಕೆಟ್ ಹೊರಭಾಗದಲ್ಲಿ ಹಣ್ಣುಗಳ ಮಾರಾಟ ನಡೆದಿತ್ತು.
ಮಧ್ಯಾಹ್ನ 12 ಗಂಟೆ ನಂತರ ಪೊಲೀಸರು ಮಾರುಕಟ್ಟೆಗಳಿಂದ ವ್ಯಾಪಾರಸ್ಥರು ಹಾಗೂ ಜನರನ್ನು ಕಳುಹಿಸಿದರು. ದುರ್ಗದಬೈಲ್, ಕೊಪ್ಪಿಕರ ರಸ್ತೆ, ಕೊಯಿನ್ ರಸ್ತೆಗಳು, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಸಿಬಿಟಿ ಬಿಕೋ ಎನ್ನುತ್ತಿದ್ದವು.
ಚನ್ನಮ್ಮ ವೃತ್ತ, ಕುಸುಗಲ್ಲ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆಗಳಲ್ಲಿ ಮಧ್ಯಾಹ್ನ 12 ಗಂಟೆಯ ನಂತರವೂ ವಾಹನಗಳು ಸಂಚರಿಸುತ್ತಿದ್ದವು. ಬೈಕ್ಗಳಿಗಿಂತ ಕಾರು, ಆಟೋಗಳ ಸಂಚಾರ ಹೆಚ್ಚಾಗಿ ಕಾಣಿಸಿತು.