ಜಿಲ್ಲೆ

ವಿನಾಯಕನಗರದಲ್ಲಿ ಬಗೆಹರಿಯದ ನೀರಿನ ಸಮಸ್ಯೆ, ಸ್ವಚ್ಛವಾಗದ ರಾಜಕಾಲುವೆ, ಚರಂಡಿಗಳು, ಬಿಎಸ್‌ಎಸ್ ಶಾಲೆ ಸಮೀಪ ರಾತ್ರಿ ವೇಳೆ ಪುಂಡರ ಕಾಟ

ರಾಜೇಶ್.ಎಸ್.ಜಿ. ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ

ನಗರಸಭೆ 4ನೇ ವಾರ್ಡ್‌ನ ವಿನಾಯಕ ನಗರದಲ್ಲಿ ನೀರು, ರಾಜಕಾಲುವೆ, ಚರಂಡಿಗಳ ಸಮಸ್ಯೆ ಬಗೆಹರಿದಿಲ್ಲ.

ನಗರದಿಂದ ಹಾದು ಹೋಗಿರುವ ರಾಜಕಾಲುವೆ ಶೇ.30 ಸ್ವಚ್ಛತೆ ಕಾಣಬೇಕಿದೆ. ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಸ್ಥಳದ ಕೊರತೆ ಇದೆ ಎಂಬುದು ನಗರಸಭೆ ಸದಸ್ಯೆ ಬಿ. ನಾಗರತ್ನಮ್ಮ ಅಭಿಪ್ರಾಯ.

ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ರಾಜಕಾಲುವೆ ಸ್ವಚ್ಛಗೊಳಿಸುವ ತುರ್ತು ಇದೆ. ವಾರ್ಡ್ ವ್ಯಾಪ್ತಿಯ ಬಹುದೊಡ್ಡ ರಾಜಕಾಲುವೆ ಕಾಮಗಾರಿ ಬಹುತೇಕ ಮುಗಿದಿದೆ. ಕೆಲ ಭಾಗದಲ್ಲಿ ಇನ್ನೂ ಬಾಕಿಯಿದೆ. ವಾರ್ಡ್‌ನ ಅಲ್ಲಲ್ಲಿ ಕೆಲ ಚರಂಡಿಗಳು ಸ್ವಚ್ಛಗೊಂಡಿಲ್ಲ ಎಂಬ ಕೊರತೆ ಬಿಟ್ಟರೆ, ಉಳಿದೆಡೆ ಸಮಸ್ಯೆ ಅಷ್ಟಿಲ್ಲ.

ಪೌರಕಾರ್ಮಿಕರ ಬೀದಿಗಳು ಅಭಿವೃದ್ಧಿ ಆಗಬೇಕು: ವಾರ್ಡಿನಲ್ಲಿ ವಾಸವಾಗಿರುವ ಪೌರಕಾರ್ಮಿಕರ ಬೀದಿಗಳೇ ಅಭಿವೃದ್ಧಿಯಿಂದ ವಂಚಿತವಾಗಿವೆ. ಪ್ರಮುಖವಾಗಿ ಅಂಬೇಡ್ಕರ್ ಭವನ, ಚರಂಡಿಗಳ ಸ್ವಚ್ಛತೆ ಹಾಗೂ ಕೆಲ ಭಾಗದಲ್ಲಿ ಚರಂಡಿ ನಿರ್ಮಾಣ ಆಗಬೇಕಿದೆ. ಆದರೆ ಇಲ್ಲಿನ ರಸ್ತೆಗಳು ಮಾತ್ರ ಬಹುತೇಕ ಸುಸ್ಥಿತಿಯಲ್ಲಿವೆ.

ನಿವೇಶನಗಳೇ ಕಸದ ತೊಟ್ಟಿ: ವಾರ್ಡಿನಲ್ಲಿ ಸ್ವಚ್ಛತೆ ಇದೆಯಾದರೂ ಖಾಸಗಿ ನಿವೇಶನಗಳು ಕಸದ ತೊಟ್ಟಿಗಳಾಗಿವೆ. ನಿವೇಶನದ ಮಾಲೀಕರಿಗಾದರೂ ಕಸ ತೆರವುಗೊಳಿಸಿ, ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ನಗರೋತ್ಥಾನ ಯೋಜನೆಯಡಿ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 8 ರಸ್ತೆಗಳಿಗೆ ಒಳಚರಂಡಿ ವ್ಯವಸ್ಥೆ ಆಗಬೇಕಿದೆ. 7 ರಸ್ತೆಗಳೂ ಅಭಿವೃದ್ಧಿಯಾಗಬೇಕಿದೆ. ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಮತ್ತೆ ಕೀಳಬೇಕಾದ ಅನಿವಾರ್ಯತೆ ಇದೆ. ಹೆಚ್ಚುವರಿಯಾಗಿ ಉದ್ಯಾನ ನಿರ್ಮಿಸಬೇಕಿದೆ. ಶುದ್ಧ ನೀರಿನ ಘಟಕ ಅಗತ್ಯವಾಗಿದೆ. ಪೌರಕಾರ್ಮಿಕರಿಗಾಗಿ ಅಂಬೇಡ್ಕರ್ ಭವನ ನಿರ್ಮಿಸಬೇಕಿದೆ. ಒಟ್ಟಾರೆ ವಾರ್ಡ್ ಶೇ.80 ಅಭಿವೃದ್ಧಿ ಕಂಡಿದೆ. ಬಿ.ನಾಗರತ್ನಮ್ಮ, ನಗರಸಭೆ ಸದಸ್ಯರು ವಾರ್ಡಿನಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ನಗರಸಭೆ ಸದಸ್ಯರು ಸ್ವಚ್ಛತೆಗೆ ಒತ್ತು ನೀಡುತ್ತಿದ್ದಾರೆ. ಆದರೆ ನೀರಿನ ಸಮಸ್ಯೆ ಇದ್ದು, ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕಿದೆ. ಬಿಎಸ್‌ಎಸ್ ಶಾಲೆ ಸಮೀಪ ಪುಂಡರು ರಾತ್ರಿ ವೇಳೆ ಉಪಟಳ ನೀಡುತ್ತಿದ್ದಾರೆ. ಹೆಣ್ಣುಮಕ್ಕಳು ಆಚೆ ಓಡಾಡದ ಪರಿಸ್ಥಿತಿ ಇದೆ. ಹೀಗಾಗಿ ಒಂದು ಬೀದಿದೀಪ ಅಳವಡಿಸಬೇಕಿದೆ. ಕೆ.ಎನ್.ರಘುನಂದನ್, ವಿನಾಯಕನಗರ ನಿವಾಸಿ