ಜಿಲ್ಲೆ

ವಿನಾಕಾರಣ ಮನೆಯಿಂದ ಹೊರ ಬರಬೇಡಿ

ಚಿತ್ರದುರ್ಗ:ಜಿಲ್ಲಾದ್ಯಂತ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3ರವರೆಗೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಯಂದಿರು, ವಯೋವೃದ್ಧ ರು ಮತ್ತು ಚಿಕ್ಕಮಕ್ಕಳು ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಸಲಹೆ ನೀಡಿದ್ದಾರೆ.
ಬೇಸಿಗೆ ಬಿಸಿಲು ಅಧಿಕವಾಗುತ್ತಿದ್ದು, ಮನೆಯಿಂದ ಹೊರಗೆ ಹೋಗುವ ಅನಿವಾರ್ಯವಿದ್ದರೆ ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಕುಡಿವ ನೀರು, ಛತ್ರಿ, ಮಕ್ಕಳ ತಲೆಗೆ ನೀರಿನಿಂದ ಒದ್ದೆ ಬಟ್ಟೆ ಹಾಕುವುದಕ್ಕೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ನೆರಳಿನಲ್ಲಿರಬೇಕು. ಆಗಾಗ್ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಪ್ರಯಾಣ ಮಾಡುವಾಗ ಕುಡಿಯುವ ನೀರು ಜತೆಗಿರಬೇಕು. ಒಆರ್‌ಎಸ್, ನಿಂಬೆ ಹಣ್ಣಿನ ಶರಬತ್, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು.
ಕಲ್ಲಂಗಡಿ, ಕರ್ಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್ ಹಾಗೂ ಸೌತೆಕಾಯಿ, ಎಳೆನೀರು ಸೇವಿಸಬೇಕು. ತಿಳಿ, ಬಿಳಿಬಣ್ಣದ ಸಡಿಲ ಹತ್ತಿ ಬಟ್ಟೆ ಧರಿಸುವುದು ಉತ್ತಮ. ಮಧ್ಯಾಹ್ನದ ವೇಳೆ ಶ್ರಮದಾಯಕ ಕೆಲಸ ಬೇಡ. ಚಪ್ಪಲಿ ಧರಿಸದೆ ಹೊರಗೆ ಹೋಗಬಾರದು. ಮದ್ಯ, ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶವುಳ್ಳ ಪದಾರ್ಥಗಳನ್ನು ಸೇವಿಸಬಾರದು. ಶುದ್ಧೀಕರಿಸದ ನೀರು ಕುಡಿಯಬಾರದು. ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ, ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು.
ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು ಇತ್ಯಾದಿ ತೊಂದರೆಗಳು ಕಂಡು ಬರುತ್ತವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಆರ್‌ಎಸ್, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನಿಡಲು ಹಾಗೂ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಎಚ್‌ಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.