ಜಿಲ್ಲೆ

ವಿನಾಕಾರಣ ತೊಂದರೆಗೆ ಪರಿಹಾರ

ಬೀದರ್: ಸರ್ಕಾರಿ ನೌಕರರ ವಿರುದ್ಧ ನೀಡುವ ಅನಾಮಧೇಯ ದೂರುಗಳ ತನಿಖೆ ನಡೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ವಿನಾಕಾರಣ ತೊಂದರೆಗೆ ಒಳಗಾಗುತ್ತಿದ್ದ ನೌಕರರ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ದಾಖಲಾಗುವ ದೂರುಗಳು ಕೆಲ ಸಂದರ್ಭದಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಹಾಗೂ ಪೂವಾಗ್ರಹ ಪೀಡಿತ ಆಗಿರುತ್ತಿದ್ದವು. ಪೂರಕ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸದ ಕಾರಣ ನೌಕರರು ದೈನಂದಿನ ಕೆಲಸ ಕಾರ್ಯಗಳನ್ನು ಮುಕ್ತ ಹಾಗೂ ನಿರ್ಭಿಡೆಯಿಂದ ನಿರ್ವಹಿಸಲು ತೊಂದರೆಯಾಗುತಿತ್ತು. ನೌಕರರಿಗೆ ಆಗುತ್ತಿದ್ದ ಅನಗತ್ಯ ಕಿರಿಕಿರಿ ತಪ್ಪಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾಡಿದ ಮನವಿಗೆ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದ್ದಾರೆ.

ಅನೇಕರು ನಕಲಿ ಹೆಸರು, ವಿಳಾಸ ಬಳಸಿಕೊಂಡು ರಾಜ್ಯ ನೌಕರರ ವಿರುದ್ಧ ದೂರು ನೀಡಿ ಅನಗತ್ಯವಾಗಿ ತನಿಖೆಗೆ ಕಾರಣರಾಗುತ್ತಿದ್ದದ್ದನ್ನು ಸಂಘ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿತ್ತು ಎಂದು ತಿಳಿಸಿದ್ದಾರೆ.

ದೂರುಗಳನ್ನು ಸ್ವೀಕರಿಸಿದಾಗ ದೂರು ನೀಡಿದ ವ್ಯಕ್ತಿಯ ಹೆಸರು, ವಿಳಾಸ ಖಚಿತಪಡಿಸಿಕೊಂಡು, ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ನಂತರ, ಆರೋಪ ಮೇಲ್ನೊಟಕ್ಕೆ ಕಂಡು ಬಂದಲ್ಲಿ ಮಾತ್ರ ದೂರನ್ನು ಪ್ರಾಥಮಿಕ ತನಿಖೆ/ವಿಚಾರಣೆಗೆ ಒಳಪಡಿಸಬೇಕು ಎಂದು ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.

ಆರೋಗ್ಯ ಯೋಜನೆಗೆ ಸಂತಸ: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯಾಗಿ ಮಾರ್ಪಡಿಸಿ, ಇದರಡಿ ಏಪ್ರಿಲ್ 1 ರಿಂದಲೇ ಸರ್ಕಾರಿ ನೌಕರರ ಎಲ್ಲ ಬಗೆಯ ಶಸ್ತ್ರಚಿಕಿತ್ಸೆಗಳನ್ನು ನಗದು ರಹಿತವಾಗಿ ಮಾಡಲಾಗುವುದು ಎಂದು ಪ್ರಕಟಿಸಿರುವುದು ಸಂತಸ ಉಂಟು ಮಾಡಿದೆ ಎಂದು ಗಂದಗೆ ತಿಳಿಸಿದ್ದಾರೆ.

ನೌಕರರ ಎಲ್ಲ ಸೌಲಭ್ಯಗಳನ್ನು ಆನ್‍ಲೈನ್ ಮೂಲಕವೇ ಜಾರಿಗೊಳಿಸುವ ಘೋಷಣೆ ಮಾಡಿರುವುದರಿಂದ ನೌಕರರಿಗೆ ಸೌಲಭ್ಯಗಳು ಸಕಾಲಕ್ಕೆ ಸಿಗಲಿವೆ ಎಂದು ಹೇಳಿದ್ದಾರೆ.