ಜಿಲ್ಲೆ

ವಿನಾಕಾರಣ ಗ್ಯಾರಂಟಿಗಳ ಟೀಕೆ ಸಲ್ಲ

ಮದ್ದೂರು ತಾಲೂಕಿನ ಗಡಿಭಾಗಕ್ಕೆ ಆಗಮಿಸಿದ ನೂತನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಶಾಸಕರಾದ ಮಧುಜಿ.ಮಾದೇಗೌಡ, ರಮೇಶ್‌ಬಾಬುಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಸ್ವಾಗತಿಸಿದರು.

ಮದ್ದೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ 5 ಗ್ಯಾರಂಟಿಗಳನ್ನು ಏಕಕಾಲದಲ್ಲೇ ಜಾರಿಗೆ ತಂದಿದೆ. ಇದನ್ನು ವಿಪಕ್ಷಗಳು ಮೊದಲು ಸ್ವಾಗತಿಸಬೇಕೆ ಹೊರತು ವಿನಾಕಾರಣ ಟೀಕೆ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.


ಕೃಷಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಶನಿವಾರ ಬೆಳಿಗ್ಗೆ ಜಿಲ್ಲೆಗೆ ಆಗಮಿಸಿದ ಎನ್.ಚಲುವರಾಯಸ್ವಾಮಿ ಅವರನ್ನು ಜಿಲ್ಲಾ ಗಡಿ ಭಾಗ ನಿಡಘಟ್ಟ ಗ್ರಾಮದ ಬಳಿ ಜಿಲ್ಲಾ ಕಾಂಗ್ರೆಸ್ ಹಾಗೂ ಮದ್ದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.


ಕಾಂಗ್ರೆಸ್‌ನ ನೂತನ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದ ನಾಯಕರುಗಳು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆಗಳಿಸಿರುವುದು ಯಾವುದೇ ಇತಿಹಾಸದಲ್ಲಿಲ್ಲ ಎಂದು ಸಮರ್ಥಿಸಿಕೊಂಡರು.
ಸರ್ಕಾರದ ಇಂತಹ ಮಹತ್ತರ ಯೋಜನೆಗಳ ಬಗ್ಗೆ ಈ ಹಿಂದೆ ತಲೆ ಕೆಡಿಸಿಕೊಳ್ಳದ ವಿರೋಧ ಪಕ್ಷಗಳು ಈಗ ಗ್ಯಾರಂಟಿ ಯೋಜನೆಗಳು ಜನಪ್ರಿಯತೆ ಪಡೆದುಕೊಂಡಿರುವುದನ್ನು ಕಂಡು ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಯೋಜನೆಗಳಿಗೆ ಯಾವ ರೀತಿ ಸಂಪನ್ಮೂಲ ಕ್ರೂಡೀಕರಣ ಮಾಡಿ ಹೇಗೆ ಅನುಷ್ಠಾನಗೊಳಿಸಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಎಂದು ವಿಪಕ್ಷ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ನಾನು ಕೂಡ ಹಳ್ಳಿಯ ಮಗ. ರೈತರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ಆತ್ಮಹತ್ಯೆ ಪ್ರಕರಣಗಳು ಮೊದಲು ನಿಲ್ಲಬೇಕು. ರೈತರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಮೊದಲು ಅಧಿಕಾರಿಗಳ ಸಭೆ ನಡೆಸಿ ಯಾವ ಯೋಜನೆಗಳು ಜಾರಿಗೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.


ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೆ ಮೈಷುಗರ್ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ ಆರಂಭ ಮಾಡಲು 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡಿ ಕಬ್ಬು ಅರೆಯುವ ಸಾಮರ್ಥ್ಯದ ಜತೆಗೆ ಉಪಉತ್ಪನ್ನಗಳನ್ನು ತಯಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.