ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ಗುರುವಾರ ತಿರಸ್ಕರಿಸಿದೆ. ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಬುಧವಾರ ಇಡೀ ದಿನ ನಡೆದಿತ್ತು. ಸಿಬಿಐ ಪರ ವಕೀಲರು ವಿನಯ ಕುಲಕರ್ಣಿಗೆ ಜಾಮೀನು ನೀಡಬಾರದೆಂದು ಪ್ರತಿವಾದ ಮಂಡಿಸಿದ್ದರು. ನ್ಯಾಯಪೀಠ ಜಾಮೀನು ಅರ್ಜಿಯ ಹೆಚ್ಚಿನ ವಿಚಾರಣೆ ಗುರುವಾರಕ್ಕೆ ಮುಂದೂಡಿತ್ತು.
ಸಿಬಿಐ ಪರ ಎಸ್.ವಿ. ರಾಜು ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರತಿವಾದ ಮಂಡಿಸಿದರು. ವಿನಯ ಕುಲಕರ್ಣಿ ಪರ ಶಶಿಕಿರಣ ಶೆಟ್ಟಿ ಹಾಗೂ ಬಾಹುಬಲಿ ಧನವಾಡೆ ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ವಿನಯಗೆ ಜಾಮೀನು ತಿರಸ್ಕರಿಸಿ ಆದೇಶಿಸಿತು. ಈ ಮೊದಲು ಜಿಲ್ಲಾ ಸಿಬಿಐ ವಿಶೇಷ ನ್ಯಾಯಾಲಯದಲ್ಲೂ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಂಡಿದ್ದು, ಉಲ್ಲೇಖಾರ್ಹ.
ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಂಚು ಮತ್ತು ಸಾಕ್ಷಿನಾಶ ಆರೋಪದಡಿ ವಿನಯ ಕುಲಕರ್ಣಿ ನ. 5ರಂದು ಸಿಬಿಐನಿಂದ ಬಂಧಿಸಲ್ಪಟ್ಟಿದ್ದಾರೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಅವರ ನ್ಯಾಯಾಂಗ ಬಂಧನ ಅವಧಿ ಜ. 22ಕ್ಕೆ ಮುಕ್ತಾಯಗೊಳ್ಳಲಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಮಾವ ಚಂದ್ರಶೇಖರ ಇಂಡಿ, ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದು, ಅವರ ನ್ಯಾಯಾಂಗ ಬಂಧನ ಅವಧಿಯೂ ಜ. 22ಕ್ಕೆ ಕೊನೆಗೊಳ್ಳಲಿದೆ.