ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ವಿನಯ ಸೋದರ ಮಾವ ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನವನ್ನು 14 ದಿನಗಳ ಕಾಲ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ನ. 5ರಂದು ಬಂಧನವಾಗಿ ಹಿಂಡಲಗಾ ಜೈಲು ಸೇರಿರುವ ವಿನಯ ಕುಲಕರ್ಣಿ ಹಾಗೂ ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿ ಜಿಲ್ಲಾ ಕಾರಾಗೃಹ ಸೇರಿರುವ ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ಅವಧಿ ಜ. 22ಕ್ಕೆ ಪೂರ್ಣವಾಗಿತ್ತು. ಶುಕ್ರವಾರ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ, ಅವಧಿಯನ್ನು ಫೆ. 4ರವರೆಗೆ ವಿಸ್ತರಿಸಿದೆ. ಜಾಮೀನು ಕೋರಿ ಇಲ್ಲಿನ ಹೈಕೋರ್ಟ್ ಪೀಠದಲ್ಲಿ ವಿನಯ ಪರ ಸಲ್ಲಿಸಿದ್ದ ಅರ್ಜಿ ಗುರುವಾರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಜೈಲಿನಲ್ಲೇ ಕಾಲ ಕಳೆಯುವುದು ಅನಿವಾರ್ಯವಾಗಿದೆ.