ಹಾಸನ : ವಿಧಾನ ಸಭೆಯ ಕಾರ್ಯ ಕಲಾಪಗಳ ಹೇಗೆ ನಡೆಯುತ್ತವೆ ಎಂದು ಮಕ್ಕಳು ಮಾಧ್ಯಮಗಳಲ್ಲಿ ನೋಡಿರುತ್ತಾರೆ ಅದರಂತೆ ಇಂದು ಅಣುಕು ಪ್ರದರ್ಶನ ಮಾಡುವ ಮೂಲಕ ಸ್ವ ಅನುಭವ ಪಡೆಯುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್ ಕೆ.ಎಸ್ ಹೇಳಿದರು.
ನಗರದ ಗುರು ಭವನದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ, ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗೂ ಜನಪ್ರತಿನಿಧಿಗಳು ಹಾಗಾಗಿ ಅವರು ಪಠ್ಯದಲ್ಲಿ ಓದುವಂತೆ ರಾಜಕೀಯ, ಪ್ರಜಾಪ್ರಭುತ್ವ ಮತ್ತು ವಿಧಾನ ಸಭೆಯ ಕಾರ್ಯ ಕಲಾಪಗಳ ವೈಖರಿಯನ್ನು ಪ್ರಾಯೋಗಿಕವಾಗಿ ತಿಳಿಸುವ ಉದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ವಿಧಾನ ಸಭೆಯ ಕಾರ್ಯ ಕಲಾಪಗಳು ಹೇಗೆ ನಡೆಯುತ್ತವೆ ಎಂದು ಅಣಕು ಪ್ರದರ್ಶನ ನೀಡುವ ಮೂಲಕ ವಿಧಾನ ಸಭೆಯ ನೈಜ ವಾತಾವರಣವನ್ನು ಸೃಷ್ಠಿಸಿ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರುಗಳಾದ ಕಾಂತರಾಜು, ಬಿ. ಶೇಖರೇಗೌಡ , ಕೃಷ್ಣ ಇತರರು ಇದ್ದರು.