ವಿಜಯಪುರ: ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಧನ ಹೆಚ್ಚಿಸದಿದ್ದರೆ ನನಗೂ ಹೆಚ್ಚುವರಿ ಗೌರವ ಧನ ಬೇಡ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಗೌರವ ಧನ ಹೆಚ್ಚಿಸಲು ಆರ್ಥಿಕ ನೆಪ ಹೇಳುವ ಸರ್ಕಾರ ಶಾಸಕರ ಹಾಗೂ ಸಚಿವರ ಗೌರವ ಧನ ಹೆಚ್ಚಿಸಿದ್ದು ಹೇಗೆ? ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಧನ ಹೆಚ್ಚಿಸದಿದ್ದರೆ ನನಗೂ ಗೌರವ ಧನ ಹೆಚ್ಚಳ ಬೇಡ. ಈ ಬಗ್ಗೆ ರಾಜ್ಯ ನಾಯಕರ ಮುಂದೆ ನಿರ್ಧಾರ ಪ್ರಕಟಿಸುವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಧನ ಹೆಚ್ಚಿಸಲು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು, ಅಧಿವೇಶನ ದಲ್ಲೂ ಸತತ ಮೂರು ಬಾರಿ ಪ್ರಶ್ನೆ ಮಾಡುತ್ತಾ ಬಂದಿದ್ದೇನೆ. ಆದರೂ ಸರ್ಕಾರ ಸ್ಪಂದಿಸದಿರುವುದು ಖೇದಕರ. ಹೀಗಾಗಿ ಸದಸ್ಯರ ಗೌರವ ಧನ ಹೆಚ್ಚಿಸಲು ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಪ್ರಸಕ್ತ ಅಧಿವೇಶನದಲ್ಲಿ ಗೌರವ ಧನ ಹೆಚ್ಚಿಸುವ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ ಸರ್ಕಾರ ಆರ್ಥಿಕತೆಯ ನೆಪವೊಡ್ಡಿ ಗೌರವ ಧನ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ. ಆದರೆ ಶಾಸಕರು ಹಾಗೂ ಸಚಿವರ ಗೌರವ ಧನ ಹೆಚ್ಚಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಸುನೀಲಗೌಡ ಕಿಡಿಕಾರಿದರು.
ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ವಿಧಾನ ಪರಿಷತ್ ಚುನಾವಣೆ ಸಂದರ್ಭ ಗ್ರಾಪಂ ಸದಸ್ಯರ ವೇತನ ಹತ್ತು ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿದ್ದರು. ಅಲ್ಲದೇ ಕೇರಳ ಮಾದರಿಯಲ್ಲಿ ಸೌಲಭ್ಯ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸದನದಲ್ಲಿ ಪ್ರಶ್ನೆ ಮಾಡಲಾಗಿ ಅದಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಸ್ಪಂದನೆ ನೀಡಿಲ್ಲ. ಇದು ಚುನಾವಣೆಯ ಗಿಮಿಕ್ ಮಾತ್ರವಾ ಎಂದು ತಿಳಿಸಬೇಕು ಎಂದು ಸುನೀಲಗೌಡ ಪಾಟೀಲ ಆಕ್ರೋಶ ಹೊರಹಾಕಿದರು.
ಕೇರಳದಲ್ಲಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಕಾರು, ಮೊಬೈಲ್ ಕೊಡುತ್ತಾರೆ. ಹಾಗಾದರೆ ಇಲ್ಲೂ ಕೊಡಲಿ ಎಂದು ಆಗ್ರಹಿಸಿದರು.
ಸದ್ಯ ನಾವು ಬೇಡಿಕೆ ಇರಿಸಿದ್ದು ಕೇವಲ ಗೌರವ ಧನ ಹೆಚ್ಚಿಸಿ, ಬಸ್ ಪಾಸ್ ಖಚಿತವಾಗಿ ನೀಡಬೇಕೆಂದು. ಇಷ್ಟು ಚಿಕ್ಕ ಬೇಡಿಕೆ ಈಡೇರಿಸದವರು ಕೇರಳ ಮಾದರಿ ತರಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವ ಧನ ಹೆಚ್ಚಿಸಬೇಕು. ಹಾಗೆ ಮಾಡಿದಲ್ಲಿ ನಳೀನಕುಮಾರ ಕಟೀಲ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸನ್ಮಾನಿಸಲಾಗುವುದು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ ಇದ್ದರು.