ಜಿಲ್ಲೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಪ್ರಥಮ ಪ್ರಾಶಸ್ತ್ಯ ಮತ ನೀಡಿ:ವಾಟಾಳ್ ನಾಗರಾಜ್

Hassan - Mohan Kanthur

ಹಾಸನ: ಜೂ.3 ರಂದು ವಿಧಾನ ಪರಿಷತ್ ಚುನಾವಣೆ ನಾನೂ ಸ್ಪರ್ಧೆ ಮಾಡಿದ್ದು, ಮತದಾರರು ಪ್ರಥಮ ಪ್ರಾಶಸ್ತ್ಯ ಮತ ನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.
ಈವರೆಗೂ ಗೆಲುವಿಗಿಂತ ಸೋಲೇ ಜಾಸ್ತಿ ಕಂಡಿದ್ದೇನೆ. ರಾಜಿ ಮಾಡಿಕೊಂಡಿದ್ದರೆ ನಾನು ಏನು ಬೇಕಾದರೂ ಆಗಬಹುದಿತ್ತು. ವಿಧಾನಪರಿಷತ್‌ನ್ನು ಗೌರವದ ಸ್ಥಾನವಾಗಿ ಕಾಣಬೇಕು. ಅದಕ್ಕಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಿದ್ದೇನೆ. ಶಿಕ್ಷಕರ ಬೇಡಿಕೆಗಳು ಸಾಕಷ್ಟಿವೆ. ಶಿಕ್ಷಕರ ಪರವಾಗಿ ಮೇಲ್ಮನೆಯಲ್ಲಿ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ಮೊದಲ ಪ್ರಾಶಸ್ತ್ಯ ಮತ ಕೊಟ್ಟು ತಮ್ಮನ್ನ ಬೆಂಬಲಿಸಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂದು ಉತ್ತಮ ವ್ಯಕ್ತಿತ್ವ ಉಳ್ಳ ಜನ ಕಡಿವೆಯಾಗಿದ್ದಾರೆ. ನಾನು ಕನ್ನಡ, ಕರ್ನಾಟಕ ಬಿಟ್ಟು ಅಲ್ಲಾಡಲಿಲ್ಲ, ಯಾವುದೇ ರಾಜಿ, ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಪರಿಷತ್‌ನಲ್ಲಿ 75 ಜನ ಇದ್ದಾರೆ, ಅದರ ಗೌರವ ಕಾಪಾಡೋದು ಕರ್ತವ್ಯ ಎಂದರು.
ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 21 ಸಾವಿರ ಮತದಾರರಿದ್ದಾರೆ. ಮೈಸೂರಿನಲ್ಲಿ ಹೆಚ್ಚಿದ್ದಾರೆ. ಎಲ್ಲರಿಗೂ ಸಂದೇಶದ ಮೂಲಕ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ವಿನಂತಿಸಿದರು
ರಾಜ್ಯದಲ್ಲಿ ಅನೇಕ ಸಮಸ್ಯೆ ಇವೆ, ಆ ಬಗ್ಗೆ ಪರಿಷತ್‌ನಲ್ಲಿ ಚರ್ಚೆ ಆಗಬೇಕು, ಆದರೆ ಆಗುತ್ತಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಹಾಗೂ ಶಿಕ್ಷಕರ ಬೇಡಿಕೆ ಈಡೇರಿಸಲು ಪರಿಷತ್‌ನಲ್ಲಿ ಹೋರಾಟ ಮಾಡುವೆ ಎಂದು ಭರವಸೆ ನೀಡಿದರು.
ಶಿ ಕ್ಷಕರು ನಮ್ಮ ಸಮಾಜದ ಭವಿಷ್ಯದ ಪ್ರಜೆಗಳನ್ನು ರೂಪಿಸುವವರು, ಅವರು ಬೀದಿಗೆ ಬರಬಾರದಂತೆ ಅವರ ಬೇಡಿಕೆ ಈಡೇರಿಸಬೇಕು, ಈ ಬಗ್ಗೆ ಆಳುವ ಸರ್ಕಾರ ಗಮನ ಹರಿಸಬೇಕು ಎಂದರು. ಶಿಕ್ಷಕ ಮತದಾರರು ನನ್ನನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೋರಾಟ ಮಾಡುವೆ: ಇದೇ ವೇಳೆ ಪ್ರಜ್ವಲ್ ಪೆನ್‌ಡ್ರೈವ್ ಹಗರಣದ ಬಗ್ಗೆ ಮಾತನಾಡಲು ನಿರಾಕರಿಸಿದ ವಾಟಾಳ್, ಸಂತ್ರಸ್ತ ಮಹಿಳೆಯರಿಗೆ ನೆರವು ಕೊಡಿಸುವುದು ಎಲ್ಲರ ಕರ್ತವ್ಯ, ಶೋಷಣೆಗೊಳಗಾದ ಮಹಿಳೆಯರ ಪರ ದೊಡ್ಡ ಹೋರಾಟ ಮಾಡುವೆ ಎಂದರು.
ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಹಾಸನದಲ್ಲೂ ಹೋರಾಟ ಮಾಡುತ್ತೇನೆ. ಅನ್ಯಾಯ ಆಗಿರುವವರಿಗೆ, ನೋವಿನಲ್ಲಿರುವವರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ಮೇ 30 ರ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ, ಪ್ರಜ್ವಲ್‌ರನ್ನ ಈವರೆಗೆ ಬಂಧನ ಮಾಡದೆ ಇರೋದು ಸರ್ಕಾರದ ವೈಫಲ್ಯ, ಇದು ಅತ್ಯಂತ ಅನ್ಯಾಯದ ಘಟನೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್, ಆಪ್ತ ಕಾರ್ಯದರ್ಶಿ ರಾಘವೇಂದ್ರ ಇತರರು ಇದ್ದರು