ಜಿಲ್ಲೆ

ವಿಧಾನ ಪರಿಷತ್ ಚುನಾವಣೆ, ಶಾಸಕ ಎಂ.ಬಿ. ಪಾಟೀಲ ಹೇಳಿಕೆ, ಕಾಂಗ್ರೆಸ್ ನಿಂದಲೇ ಗ್ರಾಮ ಸ್ವರಾಜ್ ಕನಸು ಸಾಕಾರ

Vijyapura - Parsuram Bhasagi

ವಿಜಯಪುರ: ರಾಜ್ಯದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಎಲ್ಲ ಕಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಶಾಸಕ ಡಾ.ಎಂ‌.ಬಿ. ಪಾಟೀಲ ಹೇಳಿದರು.

ಬಹುತೇಕ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ ದ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ದಿಟ್ಟ ಹೆಜ್ಜೆ ಇರಿಸಿದೆ. ಜವಾಹರಲಾಲ ನೆಹರು ಅವರು ಪಂಚಾಯತ್ ವ್ಯವಸ್ಥೆ ಜಾರಿಗೊಳಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಒದಗಿಸಿದರು.

ರಾಮಕೃಷ್ಣ ಹೆಗಡೆ ಹಾಗೂ ನಜೀರಸಾಬ್ ಅವರು ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸಿದರು. ಎಂ.ವೈ. ಘೋರ್ಪಡೆ ಅವರು ಸಹ ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆ ಗೆ ಸಾಕಷ್ಟು ಕ್ರಮ ಕೈಗೊಂಡರು. ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶಕುಮಾರ ನೇತೃತ್ವ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸಲಾಯಿತು. ಈ ಎಲ್ಲ ಕಾರಣಗಳಿಂದಾಗಿ ಜನ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ದೇಶದ ಅಭಿವೃದ್ಧಿ ನಗರಗಳ ಬೆಳವಣಿಗೆಯಲ್ಲಿಲ್ಲ. ಹಳ್ಳಿಗಳ ಅಭಿವೃದ್ಧಿ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಮನಮೋಹನ್ ಸಿಂಗ್ ಅವರು ನರೇಗಾ ಯೋಜನೆ ಜಾರಿಗೆ ತಂದು ಅಪಾರ ಅನುದಾನ ನೀಡಿದರು. ಆ ಮೂಲಕ ಸ್ಥಳೀಯ ವಾಗಿ ಉದ್ಯೋಗವಕಾಶ ಕಲ್ಪಿಸಿತು. ಹೀಗೆ ಪಂಚಾಯತ್ ರಾಜ್ಯ ವ್ಯವಸ್ಥೆ ಗೆ ಕಾಂಗ್ರೆಸ್ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಬಿಜೆಪಿ ಮಾಡಿದ್ದೇನು? ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಸದೇ ಅನ್ಯಾಯ ಮಾಡಿದೆ‌. ಬಿಜೆಪಿಗೆ ಅಧಿಕಾರ ವಿಕೇಂದ್ರೀಕರಣ ದ ಮೇಲೆ ನಂಬಿಕೆ ಇಲ್ಲ ಎಂದರು.

ವಿಜಯಪುರ- ಬಾಗಲಕೋಟೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಚುನಾವಣೆಯಲ್ಲಿ ನಮ್ಮ ನಿಲುವು ಎರಡು ಸ್ಥಾನಗಳಿಗೆ ಅಭ್ಯರ್ಥಿ ಹಾಕಬೇಕೆಂದಿತ್ತು. ಆದರೆ ಅನೇಕ ಕಾರಣಗಳಿಂದ ಸುನೀಲಗೌಡ ಪಾಟೀಲ ಅವರೊಬ್ಬರನ್ನೇ ಕಣಕ್ಕಿಳಿಸಬೇಕಾಯಿತೆಂದರು.

ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ. ಎಸ್.ಆರ್. ಪಾಟೀಲ, ಜೆ.ಟಿ. ಪಾಟೀಲ, ಅಜಯಕುಮಾರ ಸರ್ ನಾಯಕ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಆನಂದ ನ್ಯಾಮಗೌಡ ಹೀಗೆ ಅನೇಕರು ಪಕ್ಷದ ಪರ ಪ್ರಚಾರ ನಡೆಸಿದ್ದಾರೆ. ಸಿ.ಎಸ್. ನಾಡಗೌಡ, ವಿಜಯಾನಂದ ಕಾಶಪ್ಪನವರ, ರಾಜು ಆಲಗೂರ, ಎಚ್.ವೈ. ಮೇಟಿ, ಉಮಾಶ್ರೀ, ಆರ್.ಬಿ.ತಿಮ್ಮಾಪುರ, ಅಶೋಕ ಮನಗೂಳಿ, ಶರಣಪ್ಪ ಸುಣಗಾರ ಹೀಗೆ ಅನೇಕ ನಾಯಕರು ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದು ಕಳೆದ ಉಪಚುನಾವಣೆಗಿಂತಲೂ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಲಿದ್ದಾರೆ ಎಂದರು.

ಚಿಮ್ಮನಕಟ್ಟಿ ವಿಚಾರ:

ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಬಿ.ಬಿ.‌ ಚಿಮ್ಮನಕಟ್ಟಿ ಮಾಡಿರುವ ವಾಗ್ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಂ.ಬಿ. ಪಾಟೀಲ,

ಚಿಮ್ಮನಕಟ್ಟಿ ಅವರಿಗೆ ವಯಸ್ಸಾಗಿದೆ, ಹಿರಿಯರು ಎಂಬ ಕಾರಣಕ್ಕೆ ವೇದಿಕೆ ಮೇಲೆ ಕರೆತಂದು ಕೂರಿಸಿದ್ದಾರೆ. ಅವರ ಮಾತಿಗೆ ಮಹತ್ವ ಕೊಡಬೇಕಿಲ್ಲ ಎಂದರು.

ಬೆಳೆ ಹಾನಿ ವಿಚಾರ:

ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ, ತೊಗರಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು ಎಂದರು.

ಚುನಾವಣೆ ಮಧ್ಯೆ ಕೂಡ ರೈತರ ಜಮೀನುಗಳಿಗೆ ಭೇಡಿ ನೀಡಿ ಬೆಳೆ ಹಾನಿ ಪರಿಶೀಲಿಸಿದ್ದೇನೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿದ್ದು ತ್ವರಿತ ಪರಿಹಾರಕ್ಕೆ ಒತ್ತಾಯಿಸಿದ್ದೇನೆ ಎಂದರು.

ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿರಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯಬಾರದು. ಜೊತೆಗೆ ಬೆಳೆ ವಿಮೆ ಗೊಂದಲ ಬಗೆ ಹರಿಸಬೇಕು ಎಂದು ಸೂಚಿಸಿದ್ದೇನೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

ಮುಂದುವರಿದು ಬೆಳಗಾವಿಯ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವೆ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸುವೆ ಎಂದರು.