ಜಿಲ್ಲೆ

ವಿಧಾನ ಪರಿಷತ್ ಚುನಾವಣೆ, ಕಾಂಗ್ರೆಸ್ ಮುಖಂಡನಿಂದ ಮತದಾನ ಬಹಿರಂಗ....!

ಬಾಗಲಕೋಟೆ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಗೌಪ್ಯವಾಗಿಡಬೇಕಿದ್ದ ಮತದಾನವನ್ನು ಕಾಂಗ್ರೆಸ್ ಮುಖಂಡ ಬಹಿರಂಗಗೊಳಿಸಿದ್ದಾರೆ.

ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮುಖಂಡ ಸೋಮನಾಥ ಕಳ್ಳಿಮನಿ ಎಂಬುವರು ಮತ ಬಹಿರಂಗಗೊಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರಿಗೆ ಪ್ರಥಮ ಪ್ರಾಶಸ್ತ್ಯದ ಏಕೈಕ ಮತ ಚಲಾಯಿಸಿದ ಬ್ಯಾಲೇಟ್ ಪೇಪರ್ ಬಹಿರಂಗಪಡಿಸಿದ್ದಾರೆ.

ಬಾದಾಮಿ ತಾಲೂಕಿನ ಮತಗಟ್ಟೆ ಒಂದರಲ್ಲಿ ಮತದಾನ ಮಾಡಿರುವ ಬ್ಯಾಲೆಟ್ ಪೇಪರ್ ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡ ಸೋಮನಾಥ ಕಳ್ಳಿಮನಿ, ‘ಗುಡ್ ಸ್ಟಾರ್ಟಿಂಗ್ ಆ್ಯಟ್ ಬಾದಾಮಿ ಇನ್ ಮೈ ಇನ್ಚಾರ್ಜ್’ ಎಂದು ಬರೆದುಕೊಂಡಿದ್ದಾರೆ. ಸೋಮನಾಥ ಕಳ್ಳಿಮನಿ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರ ಪತಿಯಾಗಿದ್ದು, ಶಾಸಕ ಎಂ.ಬಿ. ಪಾಟೀಲರ ಕ್ಷೇತ್ರದವರಾಗಿದ್ದಾರೆ. ಮತದಾನ ಬಹಿರಂಗಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ಕೇಳಿ ಬಂದಿದ್ದು ಇದು ಚುನಾವಣೆ ಅಧಿಕಾರಿಗಳ ವೈಫಲ್ಯ ಎಂದು ಬಣ್ಣಿಸಲಾಗಿದೆ.