ಶ್ರೀರಂಗಪಟ್ಟಣ: ಪಟ್ಟಣದ ನಾದಸ್ವರ ವಿದ್ವಾನ್ ಪಿ.ರಾಜಗೋಪಾಲ್ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಕೊಡ ಮಾಡುವ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು, ಕೋಟೆ ನಾಡು ಶ್ರೀರಂಗಪಟ್ಟಣವನ್ನು ಕನ್ನಡಮ್ಮನ ಸಂಭ್ರಮದ ಆಚರಣೆ ಇನ್ನಷ್ಟು ಕಳೆಗಟ್ಟಿಸುವಂತೆ ಮಾಡಿದೆ.
ಮೂಲತಃ ಶ್ರೀರಂಗಪಟ್ಟಣದ ನಿವಾಸಿಯಾಗಿರುವ 77 ವರ್ಷದ ಪಿ.ರಾಜಗೋಪಾಲ್ ಅವರು ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದು, 65 ವರ್ಷ ಸಂಗೀತ ಕ್ಷೇತ್ರದ ಕಲಾವಿದರಾಗಿ ಸಾಧನೆಗೈದಿದ್ದಾರೆ. ಈಗಾಗಲೇ ಕರ್ನಾಟಕ ಸಂಗೀತ ವೃತ್ತಿ ಅಕಾಡೆಮಿ ಸದಸ್ಯರಾಗಿ ಸೇವೆ ನೀಡಿ, ಪ್ರಸ್ತುತ ಮಾಜಿ ಸದಸ್ಯರಾಗಿದ್ದಾರೆ.
ಶಾಲಾ ಶಿಕ್ಷಣದಲ್ಲಿ ಕನ್ನಡ ವಿಭಾಗದಲ್ಲಿ 4ನೇ ತರಗತಿವರೆಗೂ ಶಿಕ್ಷಣ ಪಡೆದಿದ್ದ ಪಿ.ರಾಜಗೋಪಾಲ್ ತದನಂತರ 12ನೇ ವಯಸ್ಸಿನಿಂದಲೇ ತಮ್ಮ ತಂದೆ ಪಲ್ಲವಿ ಬಿ.ಪಾಪಯ್ಯ ಅವರ ಬಳಿ ಗುರುಕುಲ ವ್ಯಾಸಂಗ ಮಾಡಿ ಸಂಗೀತಾಭ್ಯಾಸ ನಡೆಸಿದ್ದು, ಬಳಿಕ ಪ್ರಾಥಮಿಕವಾಗಿ ಆಕಾಶವಾಣಿ ನಿಲಯ ವಿದ್ವಾಂಸ ಎ.ವಿ.ನಾರಾಯಣಪ್ಪ ಬಳಿ ಕಲಿತು, ನಂತರ ಮೈಸೂರು ದೇವೇಂದ್ರಪ್ಪ ಹಾಗೂ ಮಾಯವರಂ ಧರ್ಮ ಎ.ಗೋವಿಂದರಾಜನ್ ಬಳಿ ಸಂಗೀತ ಶಿಕ್ಷಣ ಕಲಿತಿದ್ದಾರೆ. ಅಲ್ಲದೆ ಸಂಗೀತ ವಾದ್ಯದ ನುರಿತರಾಗಿ ತಮ್ಮ ಗುರುಗಳೊಂದಿಗೆ ನಾದಸ್ವರ ನುಡಿಸಿದ್ದಾರೆ. ನಾದಸ್ವರ ಸಂಗೀತದ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಇವರು ತಮ್ಮ ಪುತ್ರ ರವಿಕಿರಣ್ ಸೇರಿದಂತೆ ಸಾವಿರಾರು ಜನರ ಶಿಷ್ಯ ವೃಂದಕ್ಕೆ ನಾದಸ್ವರ ತರಬೇತಿ ನೀಡಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯತ್ತ ಬೆಳೆಸುತ್ತಿರುವ ಇವರಿಗೆ ಗುರು ಸೇವೆಯಾಗಿ ವಿದ್ಯಾರ್ಥಿಗಳ ಸಮೂಹ ಸೇರಿ ಶೃಂಗೇರಿಯ ಆವನಿ ಶ್ರೀಗಳ ಸಮ್ಮುಖದಲ್ಲಿ ಬಂಗಾರದ ಖಡಗ ತೊಡಿಸಿ ಗೌರವಿಸಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ತಮ್ಮ ಸಂಗೀತ ಕ್ಷೇತ್ರದ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ತಮ್ಮನ್ನು ತಾಯಿ ನಾಡಿನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಪತ್ನಿ, ಪುತ್ರ ಸೇರಿದಂತೆ ಕುಟುಂಬಸ್ಥರಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಪಿ.ರಾಜಗೋಪಾಲ್ ಅತೀವ ಸಂತೋಷದಿಂದ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
a