ತ್ಯಾಗದಬಾಗಿ ಗ್ರಾಮದಲ್ಲಿ ಜಿಲ್ಲಾ ಜಾನಪದ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮವನ್ನು ಸಾಹಿತಿ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಡಾ.ಮಾಳೇನಹಳ್ಳಿ ಬಸಪ್ಪ, ಹೊಸೂರು ಪುಟ್ಟರಾಜು, ಚಿಕ್ಕನಲ್ಲೂರು ಜಯಣ್ಣ, ಇತರರಿದ್ದರು. 
ಜಿಲ್ಲೆ

ವಿದ್ವಾಂಸರು, ಸಾಹಿತಿಗಳಿಂದ ಜಾನಪದ ಕಲೆ ಶ್ರೀಮಂತ

ತರೀಕೆರೆ: ಎಚ್.ಎಲ್.ನಾಗೇಗೌಡ, ದೇ.ಜವರೇಗೌಡ, ಹಾ.ಮಾ.ನಾಯಕ, ಚಂದ್ರಶೇಖರ ಕಂಬಾರ, ಕರೀಂ ಖಾನ್ ಸೇರಿ ತರೀಕೆರೆ ತಾಲೂಕಿನ ಕೆ.ಆರ್.ಲಿಂಗಪ್ಪ ಅವರಂಥ ಸಾಹಿತಿಗಳು, ವಿದ್ವಾಂಸರು ನಾಡಿನ ಜಾನಪದ ಕಲೆ ಸಾಹಿತ್ಯ, ಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ತ್ಯಾಗದಬಾಗಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ ಭಾನುವಾರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನಿಂದ ಆಯೋಜಿಸಿದ್ದ ಜಾನಪದ ಸಾಹಿತಿಗಳ ಬದುಕು, ಬರಹ, ವಿಚಾರ ಸಂಕಿರಣ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಂಸ್ಕೃತಿ ಕಲೆಯ ಮೂಲ ಬೇರು. ಅದರಿಂದಲೇ ಸಾಹಿತ್ಯ, ಸಂಗೀತ, ವಿವಿಧ ಕಲಾ ಪ್ರಕಾರಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಜಾನಪದದಿಂದ ಕುಟುಂಬ ಮತ್ತು ಸಮಾಜದಲ್ಲಿ ಒಗ್ಗಟ್ಟು ಮೂಡವುದಲ್ಲದೆ ನಮ್ಮ ಆಹಾರ ಪದ್ಧತಿ, ಉಡುಗೆ ತೊಡುಗೆ, ಧಾರ್ಮಿಕ ಆಚಾರ ವಿಚಾರಗಳು ನಿರ್ಧಾರವಾಗಲಿವೆ. ಜಾತ್ಯತೀತ ಮನೋಭಾವ, ದುಡಿಮೆಯ ದಾರಿ ಮೂಲಕ ಭಾರತೀಯ ಸಂಸ್ಕೃತಿಯ ಮೌಲ್ಯ ಹೆಚ್ಚಿಸಲಿದೆ ಎಂದು ಹೇಳಿದರು.

ಆಧುನಿಕತೆ ಭರಾಟೆಯಲ್ಲಿ ಯುವ ಜನತೆ ನಮ್ಮತನ ಮರೆಯುತ್ತಿದ್ದು, ಇನ್ನಾದರೂ ಜಾನಪದ ಕಲೆ, ಸಾಹಿತ್ಯ, ಸಂಗೀತದ ಮಹತ್ವ ಅರಿತು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಸಾಹಿತಿ ಹೊಸೂರು ಪುಟ್ಟರಾಜು ಮಾತನಾಡಿ, ಜನಪದ ಜೀವನದೊಳಗೆ ಹಾಸುಹೊಕ್ಕಿದೆ. ಈ ನೆಲದ ಜಾನಪದ ಮನುಷ್ಯನ ವ್ಯಕ್ತಿತ್ವ ವಿಕಸನದ ಜತೆ ಆತನ ಶೈಕ್ಷಣಿಕ, ಸಾಂಸ್ಕೃತಿಕ, ಸಂಘಟನಾತ್ಮಕ, ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಸಮಾಜದಲ್ಲಿ ಅಹಿಂಸೆ, ಪರೋಪಕಾರ, ಸರಳ ಜೀವನ ರೂಢಿಸಿಕೊಳ್ಳಲು ದಾರಿ ದೀಪವಾಗಿದೆ ಎಂದು ಹೇಳಿದರು.

ಕಲಾವಿದ ಚಿಕ್ಕನಲ್ಲೂರು ಜಯಣ್ಣ ಜಾನಪದ ವಾದ್ಯಗಳ ಉದ್ಘಾಟಿಸಿ ಮಾತನಾಡಿ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಭಜನೆ ಸೇರಿ ನೂರಾರು ಕಲೆಗಳು ಕಲಾವಿದನ ಚಿಂತೆ ಮರೆಸಲಿದೆ. ಕಲೆಗಳ ಜೀವಂತಿಕೆಗೆ ಎಲ್ಲರೂ ಶ್ರಮಿಸಬೇಕು ಎಂದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಪಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ಸಂಗೀತ ವಿದ್ವಾನ್ ಜಗದೀಶ ಆಚಾರ್, ಗ್ರಾಪಂ ಸದಸ್ಯ ಕುಮಾರಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ತಿಪ್ಪೇಶ್, ಗೌರವಾಧ್ಯಕ್ಷ ದೇವರಾಜು, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಪ್ರಧಾನ ಕಾರ್ಯದರ್ಶಿ ಟಿ.ಇ.ದೇವರಾಜು, ಅಜ್ಜಂಪುರ ತಾಲೂಕು ಅಧ್ಯಕ್ಷ ಮರಳು ಸಿದ್ದಪ್ಪ, ಕಲಾವಿದರಾದ ಶಂಕ್ರಪ್ಪ, ಮಹಾಂತೇಶ, ಗಿರೀಶ್, ಚಂದ್ರಮೌಳಿ, ಲತಾ, ಯಶೋದಾ, ಸುನೀತಾ, ತಿಪ್ಪೇಶ್, ರಾಜಣ್ಣ, ಶಿವಕುಮಾರ್, ನಾಗೇಂದ್ರಪ್ಪ ಇತರರಿದ್ದರು.