ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಂಪಾದಿಸುವ ವಿಭಿನ್ನ ನೆಲೆಯ ವಿದ್ಯೆ ಜತೆಗೆ ಶ್ರೇಷ್ಠ ಸಂಸ್ಕಾರದ ಉತ್ಕೃಷ್ಟ ಜೀವನ ಮೌಲ್ಯಗಳ ಅನುಪಾಲನೆಗೆ ತೆರೆದುಕೊಂಡು, ಉನ್ನತ ವ್ಯಕ್ತಿತ್ವ ಸಂಪಾದಿಸಬೇಕು ಎಂದು ನಿರ್ಮಾಪಕ ಬಸಂತಕುಮಾರ ಪಾಟೀಲ ಹೇಳಿದರು.
ನಗರದ ಶ್ರೀಮತಿ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಶಾಲೆಯಲ್ಲಿ ಏರ್ಪಡಿಸಿದ್ದ ಆರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಬದುಕು ತಪಸ್ಸು ಇದ್ದಂತೆ. ಅಲ್ಲಿ ಎಲ್ಲವೂ ನಿಖರವಾಗಿಯೇ ನಡೆಯಬೇಕು. ಅಧ್ಯಯನದ ತನ್ಮಯತೆ ಇದ್ದಾಗ ಹೊಸ ಕಲಿಕೆ ಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ, ವಿನಯ ರೂಢಿಸಿಕೊಳ್ಳಬೇಕು. ಜನ್ಮ ನೀಡಿದ ತಂದೆ-ತಾಯಿಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಗೌರವ ಹೊಂದಿದಾಗಲೇ ವಿದ್ಯೆಗೆ ಬೆಲೆ ಬರುತ್ತದೆ ಎಂದರು.
ಪಾಲಿಕೆ ಸಹಾಯಕ ಆಯುಕ್ತ ಎಂ.ಬಿ. ಸಬರದ ಮಾತನಾಡಿ, ಪಾಲಕರು ಮತ್ತು ಪೋಷಕರು ಮಕ್ಕಳಿಗೆ ಪ್ರೀತಿಯ ನೆಲೆಯಲ್ಲಿ ಬದುಕಿನ ಧನಾತ್ಮಕ ಚಿಂತನೆ ಬೆಳೆಸಬೇಕು. ಇದರಿಂದ ಬುದ್ದಿಮತ್ತೆ ಪ್ರಮಾಣ ವಿಸ್ತೃತಗೊಳ್ಳುತ್ತದೆ ಎಂದರು.
ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಮಾತನಾಡಿ, ಶಾಲಾ ವಿದ್ಯಾರ್ಥಿಗಳನ್ನು ತರಗತಿ ಬೋಧನೆಯ ಕಲಿಕಾ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸದೆ, ವೈಜ್ಞಾನಿಕ ಅನ್ವೇಷಣೆ, ಕ್ರೀಡಾ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವ ನಿರ್ಮಾಣಕ್ಕೆ ಶಾಲಾ ಆವರಣದಲ್ಲಿ ನಿಖರ ವಾತಾವರಣ ನಿರ್ಮಿಸಲು ಶ್ರಮಿಸಲಾಗಿದೆ ಎಂದರು.
ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಋತ್ವಿಕ್ ನಾಯಕ ಹಾಗೂ ಸಾದಿಯಾ ತಾಡಪತ್ರಿ ಅವರಿಗೆ ವರ್ಷದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ವಿಶೇಷ ಚೇತನ ಮಗು ವಿನಯಕುಮಾರ ಬೆಳ್ಳಿಗಟ್ಟಿಗೆ ಗೌರವಿಸಲಾಯಿತು.
ಸೋಮೇಶ ಗಂಗಣ್ಣವರ, ಅಶ್ವಿನಿ ದೊಡ್ಡಬಳ್ಳಾಪುರ, ಪ್ರೇರಿತಾ ಚರಂತಿಮಠ, ಅಮಿತಕುಮಾರ ಮಂಡಲ ಇದ್ದರು. ವಿನಾಯಕ ಡೊಂಬರಕೊಪ್ಪ ಹಾಗೂ ಸಂಸ್ಕೃತಿ ನರಸಾಲಿ ನಿರೂಪಿಸಿದರು. ಭೈರವ ಚರಂತಿಮಠ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.