ಜಿಲ್ಲೆ

ವಿದ್ಯೆ ಸೋಮಾರಿಯ ಸ್ವತ್ತಲ್ಲ, ಸಾಧಕನ ಸ್ವತ್ತು:ಸಚಿವ ಕೆ.ಎನ್.ರಾಜಣ್ಣ

ಹಾಸನ: ವಿದ್ಯೆ ಸೋಮಾರಿಯ ಸ್ವತ್ತಲ್ಲ, ಸಾಧಕನ ಸ್ವತ್ತು ಶ್ರದ್ಧೆ, ಪ್ರಮಾಣಿಕತೆ ಮತ್ತು ಪರಿಶ್ರಮದಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಆಟ್ಟಿನಲ್ಲಿ ಯುವ ಜನತೆ ಗಮನ ಹರಿಸಬೇಕು ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೃಢ ನಿರ್ಧಾರ, ನಿಶ್ಚಿತ ಗುರಿ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಯುವಕರು ಉತ್ತಮ ನಾಗರಿಕರಾಗುವ ಜೊತೆಗೆ ಸಮಾಜದ ಆಸ್ತಿಯಾಗಬೇಕು ಎಂದು ಹೇಳಿದರು.

ಯುವಜನತೆ ಈ ದೇಶದ ಆಸ್ತಿ. ಯುವಕ-ಯುವತಿಯರು ಹೆಚ್ಚು ವಿದ್ಯಾವಂತರಾಗುವ ಮೂಲಕ ತಮ್ಮ ಪೋಷಕರು, ಹುಟ್ಟೂರು, ಜಿಲ್ಲೆಗೆ ಗೌರವ ತಂದುಕೊಡುವ ಕೆಲಸ ಮಾಡಬೇಕು ಆ ಶಕ್ತಿ ನಿಮ್ಮಲಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ, ಕಲಾ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು. ಅದಕ್ಕಾಗಿ ಇಂತಹ ವೇದಿಕೆಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ಸಲಹೆ ನೀಡಿದರು.

ನಮ್ಮ ದೇಶದಲ್ಲಿರುವ ಯುವಶಕ್ತಿ ಪ್ರಪಂಚದ ಬೇರೆಯಾವ ದೇಶದಲ್ಲೂ ಇಲ್ಲ, ಹೀಗಾಗಿಯೇ ನಮ್ಮ ದೇಶವನ್ನು ಯಂಗ್ ಇಂಡಿಯಾ ಎಂದು ಕರೆಯಲಾಗುತ್ತಿದೆ. ಯುವಕರ ಭವಿಷ್ಯ ನಿಮ್ಮ ಕೈನಲ್ಲಿಯೇ ಇದೆ, ಅದನ್ನು ರೂಪಿಸಿಕೊಳ್ಳಲು ನೀವೇ ಪ್ರಯತ್ನ ಪಡಬೇಕು. ಶಿಕ್ಷಣ ಪಡೆಯುವ ಮೂಲಕ ಹೆಚ್ಚಿನ ವಿದ್ವತ್ತು ಸಂಪಾದಿಸುವ ಮೂಲಕ ಉತ್ತಮ ಭವಿಷ್ಯಕಟ್ಟಿಕೊಳ್ಳಬೇಕು. ಹಣ-ಆಸ್ತಿಯನ್ನು ಯಾರು ಬೇಕಾದರೂ ಕಸಿದುಕೊಳ್ಳಬಹುದು. ಆದರೆ, ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ,ನೆಹರು ಯುವ ಕೇಂದ್ರದ ಕರ್ತವ್ಯ ಏನಿದೆ ಎಂಬುದನ್ನು ಅಧಿಕಾರಿಗಳು ತಿಳಿದಿಕೊಂಡಿಲ್ಲ, ಅದನ್ನು ಅರಿತು ನೀವೆಲ್ಲ ಕೆಲಸ ಮಾಡಬೇಕು. ಯುವಕರನ್ನು ಸಂಘಟಿಸುವುದನ್ನು ಬಿಟ್ಟು ಯುವ ಉತ್ಸವಕ್ಕೆ ಶಾಲಾ ಮಕ್ಕಳನ್ನು ತಂದು ಕೂರಿಸಿಕೊಂಡಿದ್ದೀರಾ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆಹರು ಯುವ ಕೇಂದ್ರದ ಬದ್ಧತೆ ಎನು ಎಂಬದನ್ನು ಅಧಿಕಾರಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಯುವ ಉತ್ಸವ ಎಂದರೆ ಏನು? ಈ ಕಾರ್ಯಕ್ರಮಕ್ಕೆ ಶಾಲಾ, ಕಾಲೇಜು ಮಕ್ಕಳನ್ನು ಕರೆದುಕೊಂಡು ಬಂದು ಜೈ ಅನ್ನಿಸುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಊರು ಸೇರಿರುವ, ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟಿರುವ ಯುವಕ-ಯುವತಿಯನ್ನು ಸಂಘಟನೆ ಮಾಡುವ ಜವಾಬ್ದಾರಿ ನೆಹರು ಯುವ ಕೇಂದ್ರದ್ದು. ಅಧಿಕಾರಿಗಳು ಹಳ್ಳಿ ಕಡೆ ಹೋಗಿ ಸಂಘಟನೆ ಮಾಡುವುದಿಲ್ಲ, ನೀವು ಗ್ರಾಮೀಣ ಪ್ರದೇಶದವರನ್ನು ಮರೆತಿದ್ದೀರಿ. ಈ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದಿದ್ದೀರಿ. ಈ ಮಕ್ಕಳಿಗೆ ಯಾಕೆ ಬೇಕು, ಅವರು ಕಲೀಲಿ, ವಿದ್ಯಾವಂತರಾಗಲಿ, ಆಗ ಚಿಂತನೆ ಮಾಡಲಿ ಎಂದರು.

ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜು ಮಾತನಾಡಿ, ರಾಷ್ಟ್ರೀಯ ಯುವನೀತಿ ಪ್ರಕಾರ 15 ರಿಂದ 29 ವರ್ಷದೊಳಗಿರುವ ಜನಸಂಖ್ಯೆ 45 ಕೋಟಿ ದಾಟಿದೆ. ಈ ಯುವ ಶಕ್ತಿ ಅಣುಶಕ್ತಿಯಷ್ಟೇ ಶಕ್ತಿ ಹೊಂದಿದೆ. ಭಾರತಕ್ಕೆ ಸ್ವಾತಂತ್ರೃ ಲಭಿಸಿದ ಸಂದರ್ಭದಲ್ಲಿ ಭಾರತದ ಒಟ್ಟು ಜನಸಂಖ್ಯೆ ಇದ್ದದ್ದು ಕೇವಲ 33 ಕೋಟಿ, ಈಗ ನಮ್ಮಯುವ ಶಕ್ತಿ ಅದನ್ನು ಮೀರಿಸಿದೆ. ದೇಶ ಸ್ವಾತಂತ್ರೃ ಪಡೆದು 75 ವರ್ಷ ಅಮೃತ ಮಹೋತ್ಸವ ಮುಗಿಸಿ ಅಮೃತ ಕಾಲದತ್ತ ಸಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ಯುವಸಂಪತ್ತನ್ನು ದೇಶದ ಪ್ರಗತಿಗಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಹೆಚ್.ಎಸ್.ಸ್ವರೂಪ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನತೆ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಉತ್ತಮವಾದದ್ದನ್ನೇ ಪಡೆದುಕೊಳ್ಳುವ ಜೀವನದಲ್ಲಿ ಮುಂದೆ ಸಾಗಬೇಕು. ನಿರ್ದಿಷ್ಟ ಗುರಿ ಸಾಧನೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್.ಪೂರ್ಣಿಮಾ, ನಗರಸಭೆ ಅಧ್ಯಕ್ಷ ಮೋಹನ್, ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ, ನಗರಸಭೆ ಆಯುಕ್ತ ಸತೀಶ್ ಕುಮಾರ್ ಹಾಜರಿದ್ದರು.