ಹಲಗೂರಿನ ಬೃಹನ್ಮಠದಲ್ಲಿ ನಿವೃತ್ತ ವೈದಾಧಿಕಾರಿ ವಿರುಪಾಕ್ಷ ಅವರನನು ಸನ್ಮಾನಿಸಲಾಯಿತು. 
ಜಿಲ್ಲೆ

ವಿದ್ಯೆ ಕಲಿಸಿದವರಿಗೆ ಅಭಿನಂದನೆ ಅರ್ಪಣೆ

ಹಲಗೂರು: ಪ್ರಾಥಮಿಕ ಶಾಲೆಯಿಂದ ವೈದ್ಯಕೀಯ ವೃತ್ತಿಗೆ ಬರುವವರೆಗೂ ನನಗೆ ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ಮಾರ್ಗದರ್ಶನ ನೀಡಿದ ಹಿರಿಯರಿಗೆ ಯಾವಾಗಲೂ ಋಣಿಯಾಗಿರುತ್ತೇನೆ. ಅದೇ ರೀತಿ ಇಂದು ಸ್ವೀಕರಿಸಿದ ಅಭಿನಂದನೆಯನ್ನು ಅವರಿಗೆ ಅರ್ಪಣೆ ಮಾಡುತ್ತೇನೆ ಎಂದು ನಿವೃತ್ತ ವೈದ್ಯ ಡಾ.ವಿರೂಪಾಕ್ಷ ಹೇಳಿದರು.

ಸಮೀಪದ ಬೃಹನ್ಮಠದಲ್ಲಿ ಹಲಗೂರು ವೀರಶೈವ ಸಮಾಜದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ತವರಿನಲ್ಲಿ ಸನ್ಮಾನಿಸುತ್ತಿರುವುದು ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ನಾನು ವೃತ್ತಿ ಜೀವನಕ್ಕಿಂತ ಶಿಕ್ಷಣ ವೃತ್ತಿಯನ್ನು ಹೆಚ್ಚು ಇಷ್ಟಪಡುತ್ತೇನೆ. ಈಗಲೂ ಸಹ ನಾನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದೇನೆ ಎಂದರು.

ಬಡವ ಅಥವಾ ಶ್ರೀಮಂತರಾಗಲಿ ನನ್ನ ಬಳಿ ಬಂದಾಗ ಯಾವುದೇ ತೊಂದರೆ ಆಗದಂತೆ ಸೇವೆ ಸಲ್ಲಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಸೇವೆ ನೀಡಬೇಕು ಎಂದು ವೈದ್ಯಕೀಯ ಸೇವೆ ಆರಂಭಿಸಿದೆ. ವೀರಶೈವ ಸಮಾಜದವರು ಸನ್ಮಾನಿಸುವುದಕ್ಕೆ ನಾನು ಆಭಾರಿಯಾಗಿದ್ದೇನೆ. ತಮ್ಮಿಂದ ಆಗಬೇಕಾದ ಯಾವುದಾದರೂ ಸಹಾಯ ಇದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕನಕಪುರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ದೀಪದ ಬುಡದಲ್ಲಿ ಯಾವಾಗಲೂ ಕತ್ತಲೆ ಇರುತ್ತದೆ. ಅದೇ ರೀತಿ ಎಷ್ಟೋ ಬಾರಿ ನಮ್ಮ ಊರಿನ ಪ್ರಜ್ವಲ ಬೆಳಕು ಪ್ರಕಾಶತೆ ಎಲ್ಲಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಆ ದೀಪದ ಬೆಳಕು ಹೆಚ್ಚು ಪ್ರಜ್ವಲಿಸಿ ವಿಶಾಲ ಪ್ರಪಂಚಕ್ಕೆ ಇನ್ನು ಹೆಚ್ಚಿನ ಬೆಳಕು ನೀಡುವಂತೆ ವಿರೂಪಾಕ್ಷ ಅವರು ಇನ್ನಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.

ಧನಗೂರಿನ ವೀರ ಸಂಸ್ಥಾನ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಗುರುವಿನ ಪುರದ ಮಠದ ಜಗದೀಶ ಶಿವಚಾರ್ಯ ಸ್ವಾಮೀಜಿ ಮಾತನಾಡಿದರು. ಹಲಗೂರು ವೀರಶೈವ ಸಮಾಜದ ಅಧ್ಯಕ್ಷ ಎನ್.ಮಹದೇವಸ್ವಾಮಿ, ಎಚ್.ಎಸ್.ಪರಶಿವಮೂರ್ತಿ, ಎಚ್.ಆರ್.ವಿಶ್ವ, ಮಂಜುನಾಥ್, ಎಚ್.ಎಂ.ಸದಾನಂದ್, ಬಸವರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ವಿರೂಪಾಕ್ಷ ಅವರಿಗೆ ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ, ಬೆಳ್ಳಿ ಗಣಪತಿ ವಿಗ್ರಹ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.