ಕೊಳ್ಳೇಗಾಲ: ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಮತ್ತು ಹೆಣ್ಣು ಮಕ್ಕಳಿಗೆ ಕಾನೂನು ಅರಿವಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಡಾ.ಜಿ.ಸುಧಾ ಮಾತನಾಡಿ, ಅಕ್ಷರದವ್ವೆಯರಾದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಅವರ ಅನನ್ಯ ಗೆಳೆತನ, ಅಕ್ಷರವನ್ನು ಹೆಣ್ಣುಮಕ್ಕಳಲ್ಲಿ ಬಿತ್ತುವಲ್ಲಿನ ಅವರ ಜಂಟಿ ಹೋರಾಟದ ಯಶೋಗಾಥೆಯನ್ನು ವಿವರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಚ್.ಎಸ್.ಪ್ರೇಮಲತಾ ಮಾತನಾಡಿ, ವಿದ್ಯಾರ್ಥಿನಿಯರಿಗೆ ವಿದ್ಯೆಯನ್ನು ಕಲಿತು ಸ್ವಾವಲಂಬಿಗಳಾಗಲು ಏನೇ ಅಡೆತಡೆ ಬಂದರೂ ನಿಸ್ಸಹಾಯಕರಾಗಬಾರದು. ಸಾವಿತ್ರಿಬಾಯಿ ಅವರಂತೆಯೇ ಎದ್ದುನಿಂತು ಹೋರಾಡಬೇಕು, ಪ್ರತಿ ಬಾರಿ ಯಾರೇ ನಮ್ಮನ್ನು ತುಳಿಯಲೆತ್ನಿಸಿದರೂ ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಲ್ಲಬೇಕು ಎಂದು ಕಿವಿ ಮಾತು ಹೇಳಿದರು.
ವಕೀಲೆ ನಿರ್ಮಲಾ ಮಧುಸೂದನ್ ಮಾತನಾಡಿ, ಮಕ್ಕಳಿಗೆ ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ, ವರದಕ್ಷಿಣೆ ವಿರೋಧಿ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆಯ ವಿರೋಧಿ ಕಾಯ್ದೆ, ಚುಡಾಯಿಸುವಿಕೆಯ ಮತ್ತು ಲೈಂಗಿಕ ಕಿರುಕುಳದ ವಿರುದ್ಧದ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಬಿ ಜಯಲಕ್ಷ್ಮೀ, ಸಮಿತಿಯ ಸದಸ್ಯೆ ಡಾ.ಎಚ್.ಎಸ್.ಪ್ರೇಮಲತಾ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಲ್.ಪ್ರೇಮಕುಮಾರಿ, ಅಧ್ಯಾಪಕಿಯರು ಹಾಗೂ ಕಲಾ, ವಿಜ್ಞಾನ, ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಾಜರಿದ್ದರು.