ಜಿಲ್ಲೆ

ವಿದ್ಯುತ್​ ಸ್ಥಾವರ ಸ್ಥಳಾಂತರಕ್ಕೆ ಪಟ್ಟು: ತಿಪಟೂರು ಎಸಿ ಕಚೇರಿ ಎದುರು ಡಿಂಕನಹಳ್ಳಿ ರೈತರ ಧರಣಿ

ತಿಪಟೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಡಿಂಕನಹಳ್ಳಿ ಬಳಿ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ 400 ಕೆವಿಎ ಸ್ವಿಚ್ಚಿಂಗ್​ ಸ್ಟೇಷನ್​ ಸ್ಥಳಾಂತರಕ್ಕೆ ಒತ್ತಾಯಿಸಿ ಕಳೆದ 3 ವರ್ಷಗಳಿಂದ ರೈತರು ನಡೆಸುತ್ತಿರುವ ಹೋರಾಟ ವೇಗ ಪಡೆದಿದ್ದು, ಮಂಗಳವಾರ ನೂರಾರು ರೈತರು ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಉಂಟಾಗಿ, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು.

ಉದ್ದೇಶಿತ ವಿದ್ಯುತ್​ ಸ್ಥಾವರಕ್ಕೆ ಆಯ್ಕೆ ಮಾಡಲಾಗಿರುವ ಭೂಮಿ ಫಲವತ್ತಾಗಿದ್ದು, ಕೃಷಿ ಚಟುವಟಿಕೆ ನಡೆಯುತ್ತಿದ್ದರೂ, ಉದ್ದೇಶಿತ ಜಾಗವು ಬಂಜರು ಭೂಮಿ ಎಂದು ಕೆಪಿಟಿಸಿಎಲ್​ ಶಿಫಾರಸು ಮಾಡಿದ್ದೇ ಮೊದಲ ತಪ್ಪು, ಆದರೂ ಅವರ ಶಿಫಾರಸನ್ನು ಪುರಸ್ಕರಿಸಿದ್ದು ಎರಡನೇ ತಪ್ಪು, ಆದಾಗ್ಯೂ 2019ರ ೆ.19ರಂದು ಜಿಲ್ಲಾಧಿಕಾರಿಗೆ ಖುದ್ದು ಮನವಿ ಮಾಡಿ ಫಲವತ್ತಾದ ಭೂಮಿಯನ್ನು ರೈತರ ಉಪಯೋಗಕ್ಕೆ ಬಿಟ್ಟು, ಬೇರೆ ಕಡೆ ಕೃಷಿ ಯೋಗ್ಯವಲ್ಲದ ಭೂಮಿ ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಸಲ್ಲಿಸಿದ್ದರೂ ರೈತರ ಹಿತ ಕಡೆಗಣಿಸಿ, ಆ ಭೂಮಿಯಲ್ಲೇ ವಿದ್ಯುತ್​ ಸ್ಥಾವರ ಸ್ಥಾಪಿಸಲು ಹೊರಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಅಗತ್ಯವಿರುವ ಭೂಮಿ ಬಿಟ್ಟುಕೊಡುವಂತೆ ಉಪವಿಭಾಗಾಧಿಕಾರಿಗಳು ರೈತರಿಗೆ ನೋಟಿಸ್​ ಜಾರಿ ಮಾಡಿರುವುದು ರೈತರನ್ನು ಕೆರಳಿಸಿದೆ. ಹೀಗಾಗಿ ಮಂಗಳವಾರ ಡಿಂಕನಹಳ್ಳಿ ಭಾಗದ ರೈತರು ನಗರದ ಪ್ರವಾಸಿ ಮಂದಿರದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದೂ ಅಲ್ಲದೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು, ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಶಿಾರಸು ಮಾಡಿದ ಕೆಪಿಟಿಸಿಎಲ್​ ಎಇಇ ಅವರನ್ನು ಸ್ಥಳಕ್ಕೆ ಕರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳದಲ್ಲೇ ನ್ಯಾಯ ತೀರ್ಮಾನವಾಗಬೇಕು ಎಂದು ಪಟ್ಟು ಹಿಡಿದರು.

ನೂರಾರು ರೈತ ಮಹಿಳೆಯರು ಪ್ರತ್ಯೇಕವಾಗಿ ಸ್ಥಾವರ ಸ್ಥಳಾಂತರಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಪ್ರಾರಂಭದಲ್ಲಿ ಕೆಲವರಿಂದ ಸಾಂಕೇತಿಕವಾಗಿ ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು ಕಚೇರಿಗೆ ತೆರಳಿದ ಸಂದರ್ಭ ಎಲ್ಲರೂ ನಾಮುಂದು, ತಾಮುಂದು ಎಂದು ಕಚೇರಿ ಒಳಕ್ಕೆ ಹೋಗಿ ಮನವಿ ಪತ್ರ ಸಲ್ಲಿಸಲು ಮುಂದಾದಾಗ, ಉಪವಿಭಾಗಾಧಿಕಾರಿ ಆದೇಶದಂತೆ ಮುಂಜಾಗ್ರತೆಯಾಗಿ ತಕ್ಷಣ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಕೊನೆಗೆ ಸ್ಥಳಕ್ಕೆ ಧಾವಿಸಿದ ಎಎಸ್​ಪಿ ಸಿದ್ಧಾರ್ಥ ಗೋಯಲ್​ ಪರಿಸ್ಥಿತಿ ತಿಳಿಸಿಗೊಳಿಸಿದರು. ನಂತರ ಪ್ರತಿಭಟನಾನಿರತ ಪ್ರತಿ ರೈತರಿಂದ ಎಸಿ ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.

ಸ್ಥಾವರದ ಬಳಿ ವಾಸ್ತವ್ಯ ಹೂಡುತ್ತೇವೆ: ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಶಿಫಾರಸು ಮಾಡಿದ ಕೆಪಿಟಿಸಿಎಲ್​ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಿ. 36.8 ಎಕರೆ ಕೃಷಿ ಭೂಮಿಯಲ್ಲಿ ಉದ್ದೇಶಿತ ವಿದ್ಯುತ್​ ಸ್ಥಾವರ ರಚನೆಯಾದರೆ 25ಕ್ಕೂ ಹೆಚ್ಚು ವಿದ್ಯುತ್​ ಲೈನ್​ಗಳು ಹಾದು ಹೋಗುವ ಕಾರಣ ಸಾವಿರಾರು ಎಕರೆ ಕೃಷಿ ಭೂಮಿ, ಕೃಷಿ ವಂಚಿತವಾಗುತ್ತೆ. ವಿದ್ಯುತ್​ ಸ್ಥಾವರಕ್ಕಿಂತ ಅನ್ನದಾತನ ರಕ್ಷಣೆ ಮುಖ್ಯ. ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲೇಬೇಕು. ಅಲ್ಲಿವರೆಗೂ ಉದ್ದೇಶಿತ ಸ್ಥಾವರದ ಬಳಿ ವಾಸ್ತವ್ಯ ಹೂಡುತ್ತೇವೆ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಜಗದೀಶ್​ ಎಚ್ಚರಿಸಿದರು.

ಕಂದಾಯ ಇಲಾಖೆಯದ್ದು ಏನಿದ್ದರೂ ಭೂ ಸ್ವಾಧಿನ ಮಾಡಿಕೊಡುವುದಷ್ಟೆ, ನಿಮಗೆ ಪರಿಹಾರ ಬೇಕಿದ್ದರೆ ನೀವುಗಳು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಮಾಡಬೇಕು. ನಾನೆಂದಿಗೂ ರೈತರ ಪರ, ನಿಮ್ಮ ಮನವಿಯನ್ನು ಇಂದೇ ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಮುಟ್ಟಿಸುತ್ತೇನೆ. ಇಲಾಖೆ ವತಿಯಿಂದ ಆಗಬೇಕಿರುವ ಸಹಾಯ ಮಾಡಲು ನಾನು ಸದಾ ಸಿದ್ಧ. > ದಿಗ್ವಿಜಯ್​ ಬೋಡ್ಕೆ, ಉಪವಿಭಾಗಾಧಿಕಾರಿ ತಿಪಟೂರು