ಜಿಲ್ಲೆ

ವಿದ್ಯುತ್ ಸ್ಪರ್ಶದಿಂದ ಇಬ್ಬರ ದುರ್ಮರಣ

ಮೈಸೂರು: ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರನ್ನು ರಸ್ತೆಗೆ ತಳ್ಳುವ ವೇಳೆ ತುಂಡರಿಸಿ ಬಿದ್ದ ವಿದ್ಯುತ್ ತಂತಿ ತಗುಲಿ ಚಾಲಕ ಹಾಗೂ ಸಹಾಯಕ್ಕೆ ಬಂದ ಆಟೋ ಚಾಲಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ನಗರದ ಅಶೋಕಪುರಂನ ಕಾರಿನ ಚಾಲಕ ರವಿಕುಮಾರ್(35), ಸಹಾಯಕ್ಕೆ ಬಂದ ಆಟೋ ಚಾಲಕ ಕಿರಣ್‌ಕುಮಾರ್(40) ಮೃತಪಟ್ಟವರು. ಸಂದೇಶ್, ಶಿವಕುಮಾರ್, ರವಿ ಗಾಯಗೊಂಡಿದ್ದಾರೆ.
ಅಶೋಕಪುರಂನ ರೈಲ್ವೆ ವರ್ಕ್‌ಶಾಪ್ ಬಳಿ ಗುರುವಾರ ರಾತ್ರಿ ಕಾರಿನಲ್ಲಿ ರವಿಕುಮಾರ್, ಸಂದೇಶ್, ಶಿವಕುಮಾರ್, ರವಿ, ಭಾಸ್ಕರ್ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಗುದ್ದಿದ ಬಳಿಕ ಮುಂದೆ ಹೋಗಿ ಎದುರು ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ಕಾರು ನಜ್ಜುಗುಜ್ಜಾಗಿದೆ. ಅಪಘಾತ ನಡೆದ ಬಳಿಕ ಕಾರಿನಿಂದ ಹೊರ ಬಂದ ನಾಲ್ವರು, ಸ್ಥಳದಿಂದ ಕಾರನ್ನು ರಸ್ತೆಗೆ ತರಲು ಯತ್ನಿಸಿದ್ದಾರೆ. ಈ ವೇಳೆ ಆಟೋದಲ್ಲಿ ಬಂದ ಕಿರಣ್‌ಕುಮಾರ್ ಅವರನ್ನು ಸಹಾಯಕ್ಕೆ ಕರೆದರು. ಎಲ್ಲರೂ ಸೇರಿ ಕಾರನ್ನು ರಸ್ತೆಗೆ ತಳ್ಳುವ ಸಮಯದಲ್ಲಿ ಕಂಬದಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡರಿಸಿ ಬಿದ್ದಿದ್ದರಿಂದ ಕಾರಿನ ಚಾಲಕ ರವಿಕುಮಾರ್, ಆಟೋ ಚಾಲಕ ಕಿರಣ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟರು. ವಿದ್ಯುತ್ ಆಘಾತಕ್ಕೊಳಗಾಗಿ ಸಂದೇಶ್, ಶಿವಕುಮಾರ್, ರವಿ ಅವರು ತೀವ್ರ ಅಸ್ವಸ್ಥಗೊಂಡು ಬಿದ್ದರೆ, ಭಾಸ್ಕರ್ ಅವಘಡದಿಂದ ಪಾರಾರಾಗಿದ್ದಾರೆ. ವಿದ್ಯುತ್ ಶಾಕ್‌ನಿಂದ ಗಾಯಗೊಂಡವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಹೋದರಿಯ ಮಗ ಧೀರಜ್ ಪ್ರಸಾದ್ ಅವರಿಗೆ ಸೇರಿದ ಇನ್ನೋವಾ ಕಾರನ್ನು ಚಾಲಕ ರವಿಕುಮಾರ್ ಚಲಾಯಿಸುತ್ತಿದ್ದು, ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸುವಂತೆ ತಿಳಿಸಲಾಗಿತ್ತೆನ್ನಲಾಗಿದೆ. ಆದರೆ ರವಿಕುಮಾರ್ ಕಾರನ್ನು ಹೊರ ತಂದು, ಸ್ನೇಹಿತರೊಂದಿಗೆ ಎಚ್.ಡಿ.ಕೋಟೆ ಕಡೆಯಿಂದ ಅಶೋಕಪುರಂ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಕೆ.ಆರ್.ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.