ಔರಾದ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿದರು. ವೀರಭದ್ರಪ್ಪ ಸಾಲಿಮನಿ, ಮಹೇಶ ಪಾಟೀಲ್, ಅಮೀತಕುಮಾರ ಕುಲಕರ್ಣಿ ಇದ್ದರು. 
ಜಿಲ್ಲೆ

ವಿದ್ಯುತ್ ಸಮಸ್ಯೆಯಾದರೆ ಸಹಿಸುವುದಿಲ್ಲ

ಔರಾದ್: ಔರಾದ್ ಹಾಗೂ ಕಮಲನಗರ ತಾಲೂಕಿನ ಯಾವೊಂದು ಗ್ರಾಮದಲ್ಲೂ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಕ್ಕಿದ್ದರಿಂದ ಜೀವನಾವಶ್ಯಕ ಸೇವೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.

ಎಇಇ, ಎಇ, ಜೆಇ ಸೇರಿ ಎಲ್ಲ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡುತ್ತಿರುವ ಕಾರಣ ಪ್ರತಿದಿನ ಜನತೆ ವಿದ್ಯುತ್‌ಗೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಸಂದರ್ಭದಲ್ಲಿ ಮೊಬೈಲ್ ಮುಖಾಂತರ ಸೂಚನೆಗಳನ್ನು ಕೊಡುವುದರಿಂದ ಕೆಲಸಗಳಾಗುವುದಿಲ್ಲ. ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಬೇಕು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸೂಚಿಸಿದರು.

ಕೆಲ ಲೈನ್‌ಮನ್‌ಗಳು ಖಾಸಗಿ ಸಹಾಯಕರನ್ನು ಇಟ್ಟುಕೊಂಡು ಎಲ್ಲೂ ಕುಳಿತು ಕೆಲಸ ಮಾಡುತ್ತಿದ್ದು, ಖಾಸಗಿ ವ್ಯಕ್ತಿಗಳನ್ನೇ ವಿದ್ಯುತ್ ಕಂಬಗಳನ್ನು ಹತ್ತಿಸುತ್ತಿದ್ದಾರೆ. ಪ್ರಾಣಾಪಾಯವಾದರೆ ಯಾರು ಜವಾಬ್ದಾರರು? ಸಣ್ಣ-ಪುಟ್ಟ ಕೆಲಸಗಳಿಗಾಗಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರನ್ನು ಅಮಾನತುಗೊಳಿಸಿ ಇಲಾಖೆಯನ್ನು ಜನಸ್ನೇಹಿ ಆಗಿಸಬೇಕು ಎಂದರು.

ಹAದಿಕೇರಾ, ಚಿಮ್ಮೇಗಾಂವ ಸೇರಿ ಅನೇಕ ಗ್ರಾಮಗಳಲ್ಲಿ ಮನೆಗಳ ಮೇಲಿಂದ ವಿದ್ಯುತ್ ತಂತಿ ಹಾದು ಹೋಗಿದ್ದರಿಂದ ಸಾಕಷ್ಟು ಜನರು ಅಪಾಯಕಾರಿ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂಥ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಜನರು ನಿರಾಳವಾಗಿ ಬದುಕುವಂಥ ವಾತಾವರಣ ನಿರ್ಮಿಸಬೇಕು. ಮಳೆಯಿಂದ ಸಾಕಷ್ಟು ಕಡೆ ವಿದ್ಯುತ್ ಪರಿವರ್ತಕ, ಕಂಬ ಮತ್ತು ತಂತಿಗಳು ಹಾಳಾಗಿ ವಿದ್ಯುತ್ ಕಡಿತಗೊಂಡಿದೆ. ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಚಿಮ್ಮೇಗಾಂವ-ಮಾಳೆಗಾಂವ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಯತ್ನಪಟ್ಟು ಪವರ್‌ಗ್ರಿಡ್ ಉಪ ಕೇಂದ್ರ ತಂದಿದ್ದೇನೆ. ಈ ಭಾಗದಲ್ಲಿ ಇಲಾಖೆಯಿಂದ ಸಾಕಷ್ಟು ಅವ್ಯವಹಾರ ನಡೆಯುತ್ತಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿದ್ದು, ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.

ಜೆಸ್ಕಾಂ ಅಧೀಕ್ಷಕ ಅಭಿಯಂತರ ವೀರಭದ್ರಪ್ಪ ಸಾಲಿಮನಿ, ತಹಸೀಲ್ದಾರ್‌ರಾದ ಮಹೇಶ ಪಾಟೀಲ್, ಅಮೀತಕುಮಾರ ಕುಲಕರ್ಣಿ, ಜೆಸ್ಕಾಂ ಇಇ ರಮೇಶ ಪಾಟೀಲ್, ಬಸವರಾಜ, ತಾಪಂ ಇಒಗಳಾದ ಕಿರಣ ಪಾಟೀಲ್, ಹಣಮಂತರಾಯ ಕೌಟಗೆ, ಎಡಿ ಶಿವಕುಮಾರ ಘಾಟೆ, ಎಇಇ ರವಿಕುಮಾರ ಕಾರಬಾರಿ ಇತರರಿದ್ದರು.

ಉಪ ಕೇಂದ್ರಗಳಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡಿ: ಕ್ಷೇತ್ರದ ಎಲ್ಲ ವಿದ್ಯುತ್ ಉಪ ಕೇಂದ್ರಗಳಲ್ಲಿ ಕೆಲಸಕ್ಕೆ ಸ್ಥಳೀಯರ ನೇಮಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಸಮಸ್ಯೆ ಪರಿಹರಿಸುವುದರ ಜತೆಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಎಲ್ಲ ಭಾಗಗಳಲ್ಲಿ ೩೩ ಕೆವಿ, ೧೧೦ ಹಾಗೂ ೨೨೦ ಕೆವಿ ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಿಸಿದ್ದೇನೆ. ಆದರೆ ಕೆಲಸ ಮಾಡುವ ಸಿಬ್ಬಂದಿಯನ್ನು ಹೆಚ್ಚಾಗಿ ಹೊರಗಿನವರನ್ನೇ ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚವ್ಹಾಣ್, ಕ್ಷೇತ್ರದ ಜನತೆಗೆ ಅನುಕೂಲವಾಗಿಲ್ಲವೆಂದರೆ ಈ ಉಪ ಕೇಂದ್ರಗಳನ್ನು ನಿರ್ಮಿಸಿಯೂ ವ್ಯರ್ಥ. ಹೀಗಾಗಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳಿಂದ ದೀನ್‌ದಯಾಳ ಉಪಾಧ್ಯಾಯ ಗ್ರಾಮಜ್ಯೋತಿ, ನಿರಂತರ ಜ್ಯೋತಿ, ಪಿಎಂ-ಕುಸುಮ್ ಸೇರಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಧಿಕಾರಿಗಳು ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಅರ್ಹರಿಗೆ ತಲುಪಿಸಲು ಪ್ರಯತ್ನಿಸಬೇಕು.

| ಪ್ರಭು ಚವ್ಹಾಣ್ ಶಾಸಕ