ಜಿಲ್ಲೆ

ವಿದ್ಯುತ್ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ

ಬಳ್ಳಾರಿ : ಗ್ರಾಮ ಹಾಗೂ ಕೃಷಿ ಪ್ರದೇಶಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ, ತ್ವರಿತವಾಗಿ ಸ್ಪಂದಿಸಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಜಿಪಂ ನಜೀರ್ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು. ಮಳೆಗಾಲ, ಗಾಳಿ ಇತ್ಯಾದಿ ಸಂದರ್ಭಗಳಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದಲ್ಲಿ, ಲೈನ್‌ಗಳ ನಿರ್ವಹಣೆ, ದುರಸ್ತಿ ಕಾರ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ಲೈನ್ ತುಂಡಾದಲ್ಲಿ ರೈತರು ಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸುತ್ತಾರೆ. ಆಗ ಅಧಿಕಾರಿಗಳು ಸ್ಪಂದಿಸಬೇಕು. ಅವುಗಳನ್ನು ತ್ವರಿತವಾಗಿ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು. ವಿದ್ಯುತ್ ಸಮಸ್ಯೆ ಕುರಿತಾಗಿ ರೈತರು ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸುವುದಿಲ್ಲ ಎಂಬುದಾಗಿ ಶಾಸಕರುಗಳು ಗಮನಕ್ಕೆ ತಂದಿದ್ದು, ಇಂತಹ ವರದಿಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಕಂಪ್ಲಿ ಮತ್ತು ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಹಳೆಯ ವಿದ್ಯುತ್ ಲೈನ್‌ಗಳು ಹಾದುಹೋಗಿವೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಕುರುಗೋಡು ಭಾಗದ ಬಹುವರ್ಷದ ಕೋಳೂರು ಏತ ನೀರಾವರಿ ಯೋಜನೆಯು, 20 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ ಯೋಜನೆಯಾಗಿದ್ದು, ಕೇವಲ ವಿದ್ಯುತ್ ಸರಬರಾಜಿಲ್ಲದೇ ಸ್ಥಗಿತಗೊಂಡಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೆಸ್ಕಾಂ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ ಚೌವ್ಹಾಣ, ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುತ್ತೇನೆ ಎಂದು ಸಚಿವರ ಗಮನಕ್ಕೆ ತಂದರು.
ಬಳಿಕ ಮಧ್ಯಪ್ರವೇಶಿಸಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ, ಜೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ, ಆಯಾ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಅಧಿಕಾರಿಗಳು, ಶಾಸಕರೊಂದಿಗೆ ಸಹ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದರು.
ಬುಕ್ಕ ಸಾಗರದ ಬಹು ಕುಡಿಯುವ ನೀರಿನ ಯೋಜನೆಯು ಆ ವ್ಯಾಪ್ತಿಯ 10 ಗ್ರಾಪಂ ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಇದು ಕೂಡ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿಯೇ ಕಾಮಗಾರಿ ಸ್ಥಗಿತಗೊಂಡಿದೆ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಬಂಧಿಸಿದಂತೆ ಸಾವು ಪ್ರಕರಣಗಳು ವರದಿಯಾಗಿವೆ. ಕುಟುಂಬಗಳಿಗೆ ಪರಿಹಾರ ಹಣವು ತಲುಪಿಲ್ಲ ಎಂದು ಮೃತರ ಕುಟುಂಬದವರು ಗಮನಕ್ಕೆ ತಂದಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಸಭೆಗೆ ತಿಳಿಸಿದರು.
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ವಿದ್ಯುತ್ ಸರಬರಾಜು ಸಂಬಂಧಿಸಿದಂತೆ ಕಾಮಗಾರಿಗಳ ಡಿಪಿಆರ್ ಸಿದ್ದಪಡಿಸಿ, ಕೂಡಲೇ ಅನುಮೋದನೆ ಪಡೆಯಬೇಕು. ಮಳೆಗಾಲ ಆರಂಭ ಸಮಯದ ಹಿನ್ನಲೆಯಲ್ಲಿ ಬಾಕಿ ಉಳಿದ ಮತ್ತು ಹೊಸ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಸಾವು ಪ್ರಕರಣಗಳ ಮೃತರ ಕುಟುಂಬಕ್ಕೆ ಕಾನೂನಾತ್ಮಕವಾಗಿ ಪರಿಹಾರ ನೀಡಲು ಮುತುವರ್ಜಿ ವಹಿಸಬೇಕು. ಅನಧಿಕೃತವಾಗಿ ವಿದ್ಯುತ್ ಲೈನ್ ಸಂಪರ್ಕ ಪಡೆಯುವಂತಿಲ್ಲ, ಈ ಕಾರಣಗಳಿಗಾಗಿಯೇ ವಿದ್ಯುತ್ ಸಾವು ಪ್ರಕರಣಗಳು ಸಂಭವಿಸುತ್ತವೆ, ಇವುಗಳನ್ನು ತಪ್ಪಿಸಬೇಕು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ, ಉಪಮೇಯರ್ ಡಿ.ಸುಕುಂ, ಡಾ.ಬಾಬು ಜಗನ್ಜೀವನ್ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಇದ್ದರು.