ಜಿಲ್ಲೆ

ವಿದ್ಯುತ್ ಸಮಸ್ಯೆಗಳಿಗೆ ಸಿಬ್ಬಂದಿ ಸ್ಪಂದಿಸಿ

ಶ್ರೀರಂಗಪಟ್ಟಣ: ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಸಲು ಸೆಸ್ಕ್ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸುವ ಜತೆಗೆ ರೈತರೊಂದಿಗೆ ಸಂಯಮದಿಂದ ವರ್ತಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಬೇಕು ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.

ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸೋಮವಾರ ಶ್ರೀರಂಗಪಟ್ಟಣ ಉಪ-ವಿಭಾಗ ವ್ಯಾಪ್ತಿಯ ಮಹದೇವಪುರ ನೂತನ ಶಾಖಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಮಹದೇವಪುರ ಗ್ರಾಮ ಮೈಸೂರು ನಗರಕ್ಕೆ ಸಮೀಪದಲ್ಲಿದ್ದು ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. ಹೀಗಾಗಿ ಇಲ್ಲಿ ಶಾಖಾ ಕಚೇರಿ ಸ್ಥಾಪನೆಯಿಂದ ಈ ವ್ಯಾಪ್ತಿಯ 12 ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದರಿಂದ ವಿದ್ಯುತ್ ಸಮಸ್ಯೆ, ಸಂಪರ್ಕ, ಇತರೆ ಕೆಲಸಗಳಿಗೆ ಅರಕೆರೆ ಕಚೇರಿವರೆಗೂ ಆಗಮಿಸುವುದು ತಪ್ಪಲಿದೆ. ಶೀಘ್ರದಲ್ಲೇ ಸಿಬ್ಬಂದಿ ಒದಗಿಸಲಾಗುವುದು. ಕಚೇರಿ ಸ್ಥಾಪನೆಗೆ ಸೆಸ್ಕ್‌ನ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ, ಎಂಡಿ ಕೆ.ಎಂ.ಮುನಿಗೋಪಾಲ್ ರಾಜು ಪ್ರಮುಖ ಕಾರಣ ಎಂದು ಹೇಳಿದರು.

ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದೂರು ಹೇಳುವ ಗ್ರಾಮೀಣ ಜನರೊಂದಿಗೆ ಲೈನ್‌ಮನ್‌ಗಳು ಸಂಯಮದಿಂದ ವರ್ತಿಸಿ ಪರಿಹಾರಕ್ಕೆ ಮುಂದಾಗಬೇಕು. ಶಿಥಿಲಗೊಂಡ, ಮುರಿದ ಕಂಬಗಳ ಬದಲಾವಣೆ, ತುಂಡಾದ ವಿದ್ಯುತ್ ತಂತಿಗಳು, ಪರಿವರ್ತಕಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು. ಕೃಷಿ ಚಟುವಟಿಕೆಗೆ ತೊಡಕಾಗದಂತೆ ವಿದ್ಯುತ್ ಪೂರೈಸಿ ನೆರವಾಗಬೇಕು. ಸಿಬ್ಬಂದಿ ನಿಗಮ ನೀಡಿರುವ ಸುರಕ್ಷಾ ಸಾಧನಗಳನ್ನು ಕಡ್ಡಾಯವಾಗಿ ಧರಿಸಿ ದುರಸ್ತಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗದ ರೈತರು ತಮ್ಮ ಅನಧಿಕೃತ ಐಪಿ ಸೆಟ್‌ಗಳಿಗೆ 22,500 ರೂ. ನಿಗದಿತ ಠೇವಣಿ ಪಾವತಿಸಿ ಅಧಿಕೃತ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸಬೇಕು. ಇದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ, ಕಡಿತಗೊಳಿಸುವುದು, ತಂತಿಗಳ ಕಳುವು ಪ್ರಕರಣಗಳಿಗೆ ಕಡಿವಾಣ ಸೇರಿದಂತೆ ಸಾಕಷ್ಟು ಪ್ರಯೋಜನವಾಗಲಿದೆ. ಲೈನ್‌ಮೆನ್‌ಗಳು ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರಿಂದ ಕೇಳಿಬಂದ ಸಾಕಷ್ಟು ಮನವಿಗಳಿಗೆ ಸ್ಪಂದಿಸಿದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಪ್ರತಿಕ್ರಿಯಿಸಿ ಮಹದೇವಪುರ ಗ್ರಾಮಕ್ಕೆ 2 ಕೋಟಿ ರೂ. ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುವುದು. ಶಾಲಾ -ಕಾಲೇಜು ಕಟ್ಟಡ ನಿರ್ಮಾಣಕ್ಕೂ ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನು ಗ್ರಾಮ ಮತ್ತು ಗ್ರಾಮ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುತ್ತದೆ. ಮಹದೇವಪುರ ಗ್ರಾಮದ ಸೇತುವೆ ದುರಸ್ತಿಪಡಿಸಲು ಕೇರಳದ ವಿಶೇಷ ತಂಡ ಆಗಮಿಸಿದ್ದು, ತಕ್ಷಣ ಕಾಮಗಾರಿ ಪ್ರಾರಂಭಿಸಲಿದೆ. ಇಲ್ಲಿನ 100 ಜನ ನಿರಾಶ್ರಿತ ಬಡ ಜನರಿಗೆ ನಿವೇಶನ ಕಲ್ಪಿಸಲು ತಿರ್ಮಾನಿಸಿದ್ದು ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಳೀಕೃತಗೊಳಿಸುವ ಸಲುವಾಗಿ ಜನರ ಬೇಡಿಕೆಯಂತೆ ಮಹದೇವಪುರ ಶಾಖಾ ಕಚೇರಿ ಆರಂಭಿಸಲಾಗಿದೆ. ಇದರ ಉಪಯೋಗ ಪಡೆದುಕೊಂಡು ನಿಗದಿತ ಸಮಯಕ್ಕೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ, ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ರವಿ, ಶಶಿಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜು, ತಾಪಂ ಮಾಜಿ ಸದಸ್ಯ ಕಾಳೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ತಾಪಂ ಇಒ ವೇಣು, ಸೆಸ್ಕ್ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಮಂಡ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ಜಿ.ಸೋಮಶೇಖರ್, ಪಾಂಡವಪುರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿನುತಾ, ಶ್ರೀರಂಗಪಟ್ಟಣ ವಿಭಾಗದ ಎಇಇ ಮಂಜುನಾಥ್ ಪ್ರಸಾದ್, ಸಿದ್ದೇಶ್ವರ ಕೃಷ್ಣೇಗೌಡ ಹಾಜರಿದ್ದರು.