ಮಡಿಕೇರಿ: ವಿದ್ಯುತ್ ಬಳಕೆ ದರ ಹೆಚ್ಚಳ ಖಂಡಿಸಿ ಹಾಗೂ ಸಮರ್ಪಕ ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ನಗರದ ಸೆಸ್ಕ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾನಿರತರು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಿವೆ. ಅಲ್ಲದೇ, ವಿದ್ಯುತ್ ಬಳಕೆ ದರವನ್ನು ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಎಲ್ಲ ವರ್ಗದ ಜನರಿಗೆ ಸಂಕಷ್ಟ ಎದುರಾಗಿದೆ. ಜನರ ಸಮಸ್ಯೆ ಮನಗಂಡು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರ ಇಳಿಸಬೇಕು. ಕಾಫಿ ಬೆಳೆಗಾರರಿಗೆ 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ರಹಿತ ಉಚಿತ ವಿದ್ಯುತ್ ಪೂರೈಸಬೇಕು. ಸಬ್ಸಿಡಿ ಮೂಲಕ ರಾಜ್ಯ ರ್ಸಕಾರ ನೇರವಾಗಿ ಶುಲ್ಕ ಪಾವತಿಸಬೇಕು. ಜಿಲ್ಲೆಯಲ್ಲಿ ನಿತ್ಯ ಕನಿಷ್ಠ 20 ಗಂಟೆಗಳ ಕಾಲ 3 ಫೇಸ್‌ನಲ್ಲಿ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು. ಜಂಗಲ್ ಕಟ್ಟಿಂಗ್‌ಗೆ ಕ್ರಮ ವಹಿಸಬೇಕು. ಗ್ರಾಹಕರ ಗಮನಕ್ಕೆ ತಾರದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಗ್ರಾಹಕರ ವಿಳಾಸ ಬದಲಾವಣೆಯನ್ನು ಕೇವಲ 200 ರೂ. ಒಳಗೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಅವಘಡ ಪರಿಹಾರವನ್ನು 2 ತಿಂಗಳೊಳಗೆ ನೀಡಬೇಕು. ಬಾಕಿ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಸರ್ಕಾರ ಮನ್ನಾ ಮಾಡಬೇಕು. ಶ್ರೀಮಂಗಲ, ಬಾಳೆಲೆ, ಮೂರ್ನಾಡು, ಸೋಮವಾರಪೇಟೆಯಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಕೆಲಸ ಶೀಘ್ರ ಪೂರ್ಣಗೊಳಿಸಬೇಕು. ಪೊನ್ನಂಪೇಟೆ ತಾಲೂಕಿನಲ್ಲಿ ಡಿವಿಷನ್ ಕಚೇರಿ ಸ್ಥಾಪಿಸಬೇಕು. ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ತೋಟಗಳ ನಡುವೆ ವಾಸಿಸುವ ರೈತರ ವಿದ್ಯುತ್ ಬಳಕೆ ಹೆಚ್ಚಿರುವ ಹಿನ್ನೆಲೆ ರೈತರಿಗೆ 500 ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಮೀಟರ್ ವರ್ಗಾವಣೆಗೆ ರೂ.8 ರಿಂದ 10 ಸಾವಿರ ರೂ. ಪಾವತಿ ಮಾಡಬೇಕಾಗಿದೆ. ಇದು ಹೊರೆಯಾಗಿದ್ದು, ಉಚಿತ ಸೇವೆ ಒದಗಿಸುವಂತೆ ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಮೈಸೂರು ಕೆಪಿಟಿಸಿಎಲ್ ಸೆಕ್ಟರ್ ಹಾಗೂ ಮುಖ್ಯ ಅಭಿಯಂತರ ಸೋಮರಾಜು, ರೈತ ಸಂಘದ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ಕಾರ್ಯವ್ಯಾಪ್ತಿಯಲ್ಲಿ ಆಗುವ ಕೆಲಸಗಳನ್ನು ಮಾಡಲಾಗುವುದು. ರಾಜ್ಯ ಸರ್ಕಾರಕ್ಕೆ ರೈತ ಸಂಘದ ಬೇಡಿಕೆಗಳನ್ನು ತಿಳಿಸಲಾಗುವುದು. ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು.
ಸೆಸ್ಕ್ ಜಿಲ್ಲಾ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಚಿ ಸಬಿತಾ ಭೀಮಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಕಿಸ ಮಾಚಯ್ಯ, ಸಿದ್ದಾಪುರ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ಕಂಬ ಕರುಂಬಯ್ಯ, ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಹೂವಯ್ಯ, ಸಜೀವ್, ರಾಯ್ ಮಾದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.