ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡಿದ್ದು, ಅನೇಕ ಗ್ರಾಮಗಳು ಕತ್ತಲೆಯಲ್ಲಿವೆ.
ತಾಲೂಕಿನ ಮಾದಾಪುರ, ಕುಂಬೂರು ಗ್ರಾಮಗಳಲ್ಲಿ ಮನೆ ಮೇಲೆ ಮರ ಉರುಳಿ ಭಾಗಶಃ ಹಾನಿಯಾಗಿದೆ. ನಿಡ್ತ ಗ್ರಾಮದಲ್ಲಿ ಮರವೊಂದು ಉರುಳಿ ಕೆಲಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು. ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಚನ್ನಾಪುರ ಗ್ರಾಮದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಹಾನಿಯಾಗಿದೆ, ಸೆಸ್ಕ್ ಸಿಬ್ಬಂದಿ ಮಾರ್ಗ ಸರಿಪಡಿಸಿದರು.
ಕೋವರ್‌ಕೊಲ್ಲಿಯಿಂದ ಐಗೂರು, ಹೊಸತೋಟ, ಕುಂಬೂರು, ಮಾದಾಪುರದವರೆಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಅ ಕತ್ತಲೆ ಆವರಿಸಿದೆ. ಸೆಸ್ಕ್ ಸಿಬ್ಬಂದಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.
ತಲ್ತರೆಶೆಟ್ಟಳ್ಳಿಯ ಬೋಪಯ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನಗರೂರು ಗ್ರಾಮದ ಲಿಲ್ಲಿ ಮೆನೆಜಿಸ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ತಾಲೂಕು ಕಚೇರಿ ಸಿಬ್ಬಂದಿ ತೆರಳಿ ಮಾಹಿತಿ ಪಡೆದಿದ್ದಾರೆ.