ಮೂಡಿಗೆರೆ: ಮಾಸಿಕ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂದು ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸುತ್ತಿರುವುದನ್ನು ಸ್ಥಗಿತಗೊಳಿಸಬೇಕೆಂದು ಶುಕ್ರವಾರ ತಾಲೂಕಿನ ರೈತ ಮುಖಂಡರು ಮೆಸ್ಕಾಂ ಕಚೇರಿಯಲ್ಲಿ ಎಇಇ ಜಿತೇಂದ್ರ ಅವರಿಗೆ ಮನವಿ ಮಾಡಿದರು.
ಕೃಷಿಕ ಅಮರನಾಥ್ ಮಾತನಾಡಿ, ತಾಲೂಕಿನಲ್ಲಿ ಕೃಷಿ ಉದ್ದೇಶಕ್ಕಾಗಿ ಪಡೆದ ವಿದ್ಯುತ್ ಸಂಪರ್ಕವನ್ನು ಬಿಲ್ ಮೊತ್ತ ಪಾವತಿಸಿಲ್ಲವೆಂಬ ಕಾರಣ ಮುಂದಿಟ್ಟುಕೊಂಡು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ವರ್ಷದಲ್ಲಿ 10 ರಿಂದ 15 ದಿನ ಬಳಸುವ ವಿದ್ಯುತ್‌ಗೆ ವರ್ಷಪೂರ್ತಿ ಶುಲ್ಕ ನೀಡುವಂತೆ ಮೆಸ್ಕಾಂ ಅಧಿಕಾರಿಗಳು ಒತ್ತಾಯಿಸುತ್ತಿರುವುದು ಸರಿಯಲ್ಲ. ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೆ ರೈತರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಬಾರದೆಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ ಮಾತನಾಡಿ, ಈಗ ಕಾಫಿ ಗಿಡಗಳಿಗೆ ಸ್ಪಿಂಕ್ಲರ್‌ನಿಂದ ನೀರಾಯಿಸುವ ಸಮಯವಾಗಿದೆ. ಅಗತ್ಯವಿದ್ದಾಗಲೇ ಏಕಾಏಕಿ ವಿದ್ಯುತ್ ಕಡಿತಗೊಳಿಸದರೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಂಪರ್ಕ ಕಡಿತಗೊಳಿಸುತ್ತೇವೆಂದು ರೈತರಿಗೆ ಬೆದರಿಕೆ ಹಾಗೂ ಬಿಲ್ ಮೊತ್ತ ಪಾವತಿಸುವಂತೆ ಒತ್ತಡ ಹಾಕಬಾರದು. ಈಗಾಗಲೆ ಕಡಿತಗೊಳಿಸಿರುವ ಕಡೆ ಮರು ಸಂಪರ್ಕ ನೀಡಬೇಕು. ಶೀಘ್ರವಾಗಿ ರೈತರು, ಜನಪ್ರತಿನಿಧಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳ ಸಭೆ ಕರೆದು, ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಎಲ್ಲ ರೈತ ಸಂಘಟನೆಗಳೂ ಪ್ರತಿಭಟನೆ ನಡೆಸಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿ.ಕೆ.ಲಕ್ಷ್ಮಣ್ ಗೌಡ, ಕೆ.ಎಂ.ಜಯರಾಂ, ದುಂಡುಗ ಪ್ರಮೋದ್, ಪ್ರಕಾಶ್ ಬಕ್ಕಿ, ಪ್ರೀತಮ್, ಎಂ.ಪಿ.ಸುನೀಲ್, ರಾಮಕೃಷ್ಣ, ಹರೀಶ್ ಇತರರಿದ್ದರು.