ಬೀದರ್: ತಾಲ್ಲೂಕಿನ ಚಿಕ್ಕಪೇಟೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕದ ವಿದ್ಯುತ್ ಸಂಪರ್ಕ ವೈರ್ ಹಾಗೂ ಇತರ ಸಾಮಗ್ರಿ ಕಳ್ಳತನ ಮಾಡುತ್ತಿರುವವರನ್ನು ಹುಡುಕಿ ಕೊಟ್ಟವರಿಗೆ ರೂ. 1 ಸಾವಿರ ಬಹುಮಾನ ದೊರೆಯಲಿದೆ.
ಮರಕಲ್ ಗ್ರಾಮ ಪಂಚಾಯಿತಿಯು ಇಂಥದ್ದೊಂದು ಘೋಷಣೆ ಮಾಡಿ ಸಾರ್ವಜನಿಕರ ಗಮನ ಸೆಳೆದಿದೆ.
ಚಿಕ್ಕಪೇಟೆ ಗ್ರಾಮದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟು ಮಾಡಲು ಕೆಲ ಕಿಡಿಗೇಡಿಗಳು ಪದೇ ಪದೇ ಸಾರ್ವಜನಿಕ ಕುಡಿಯುವ ನೀರಿನ ಘಟಕದ ವೈರ್ ಹಾಗೂ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿರುವುದು ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಕೆಲ ವ್ಯಕ್ತಿಗಳು ಕಳ್ಳತನ ಮಾಡುತ್ತಿರುವ ಸಾಮಗ್ರಿಗಳು ಅವರಿಗೆ ಹೆಚ್ಚಿನ ಲಾಭ ತಂದುಕೊಡುವಂಥವೇನೂ ಅಲ್ಲ. ಗ್ರಾಮದಲ್ಲಿನ ಸುಸೂತ್ರ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಅಡ್ಡಿ ಉಂಟು ಮಾಡುವುದು ಹಾಗೂ ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸುವುದು ಸಾಮಗ್ರಿ ಕಳ್ಳತನದ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕ್ಷುಲ್ಲಕ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಸಾಕ್ಷಾಧಾರ ಸಮೇತ ಕಳ್ಳತನ ಮಾಡುವವರ ಮಾಹಿತಿ ನೀಡಿದವರಿಗೆ ಪಂಚಾಯಿತಿಯಿಂದ ಒಂದು ಸಾವಿರ ರೂಪಾಯಿ ಬಹುಮಾನ ನೀಡಿ, ಸನ್ಮಾನ ಮಾಡಲಾಗುವುದು. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದ್ದಾರೆ.