ಬೆಳಗಾವಿ: ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೆಎಲ್‌ಎಸ್ ಜಿಐಟಿಯು ಬದ್ಧವಾಗಿದೆ ಎಂದು ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಪ್ರದೀಪ ಸಾವಕಾರ ಹೇಳಿದರು.
ಸ್ಥಳೀಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿ ಅವರು ಮಾತನಾಡಿದರು. 450 ಕೆವಿ ಸೌರ ಶಕ್ತಿ ಸ್ಥಾವರವನ್ನು ಕೆಎಲ್‌ಎಸ್ ಜಿಐಟಿಯ ಛಾವಣಿ ಮೇಲ್ಭಾಗದಲ್ಲಿ ಸ್ಥಾಪಿಸುವ ಮೂಲಕ ಪರಿಸರ ರಕ್ಷಣೆಯ ಉದ್ದೇಶವನ್ನು ಸಂಸ್ಥೆ ಪೂರ್ಣಗೊಳಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ವಾಹನಗಳ ಬಳಕೆಯು ಜಾಗತಿಕ ಪರಿಸರದ ರಕ್ಷಣೆಗೆ ಕಾರಣವಾಗುತ್ತದೆ. ಅಲ್ಲದೆ ಪೆಟ್ರೋಲ್ ಮತ್ತು ಡಿಸೇಲ್ ವೆಚ್ಚವನ್ನೂ ಕಡಿತಗೊಳಿಸುತ್ತದೆ ಎಂದರು.
ಉಪಾಧ್ಯಕ್ಷ ರಾಮ ಭಂಡಾರೆ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ವಿನಾಯಕ ಲೋಕೂರ ಮತ್ತು ರಾಜ ಬೆಳಗಾವಕರ, ಡಾ.ಜಯಂತ ಕಿತ್ತೂರ, ಡಾ.ಡಿ.ಬಿ.ಕುಲಕರ್ಣಿ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು.