ಜಿಲ್ಲೆ

ವಿದ್ಯುತ್ ಮೀಟರ್ ಸರಬರಾಜು ಮಾಡಿ

ಕಲಬುರಗಿ: ಜೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಏಳೆಂಟು ತಿಂಗಳಿಂದ ಸಿಂಗಲ್ ಮತ್ತು ತ್ರೀ ಫೇಸ್ ವಿದ್ಯುತ್ ಮಾಪಕಗಳ (ಮೀಟರ್) ಕೊರತೆ ಎದುರಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಕೂಡಲೆ ಮೀಟರ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಾಲಿಪಾಟೀಲ್ ಆಗ್ರಹಿಸಿದರು.
ಮೀಟರ್ ಪೂರೈಕೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆ. ೫ ರಂದು ವಿದ್ಯುತ್ ಗುತ್ತಿಗೆದಾರರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಅಂದು ನಗರಕ್ಕೆ ಅಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸದಾಗಿ ಮನೆ ನಿರ್ಮಿಸುತ್ತಿರುವ ಗ್ರಾಹಕರು ಹಾಗೂ ವಾಣಿಜ್ಯ ಉದ್ದೇಶದ ಬಳಕೆದಾರರಿಗೆ ಹೊಸದಾಗಿ ಮೀಟರ್ ಅಳವಡಿಸಲು ಆಗುತ್ತಿಲ್ಲ. ಇದರಿಂದ ಗುತ್ತಿಗೆದಾರರು ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದೇವೆ. ಕಳೆದ ಮೂರು ತಿಂಗಳಿಂದ ಜೆಸ್ಕಾಂ ಮುಖ್ಯ ಅಭಿಯಂತರರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ. ನಿರ್ಲಕ್ಷ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಈಗಾಗಲೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಗಲೆಗಳ ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿಯಲ್ಲಿ ಧರಣಿ ಕೈಗೊಂಡಾಗ ಅಧಿಕಾರಿಗಳು ಭೇಟಿ ಮಾಡಲಿಲ್ಲ. ಶಾಸಕ ಅಲ್ಲಮಪ್ರಭು ಪಾಟೀಲ್ ಆಗಮಿಸಿ ಎಂಡಿಯವರಿಗೆ ಕರೆಯಿಸಿದಾಗ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಲಿಖಿತ ಆಶ್ವಾಸನೆ ನೀಡಿದ್ದರು. ಆದರೆ, ಜೆಸ್ಕಾಂ ತಾಂತ್ರಿಕ ನಿರ್ದೇಶಕರು ಹೊರಡಿಸಿದ್ದ ಆದೇಶವೇ ರದ್ದುಪಡಿಸಿದ್ದಾರೆ ಎಂದು ಮಾಲಿಪಾಟೀಲï ಕಿಡಿಕಾರಿದರು.
ಸಂಘದ ಗೌರವ ಕಾರ್ಯದರ್ಶಿ ಕುಪೇಂದ್ರ ಶಿವನಾಯಕ, ಕಾರ್ಯದರ್ಶಿ ಬಸವರಾಜ ಒಡೆಯರ್, ಬಸವಲಿಂಗಪ್ಪ ದ್ಯಾಮಾ, ನಾಗರಾಜ, ಅಯ್ಯನಗೌಡ ಪಾಟೀಲ್ ಇತರರಿದ್ದರು.