ಜಿಲ್ಲೆ

ವಿದ್ಯುತ್ ಬೆಲೆ ಏರಿಕೆ ಆದೇಶ ಮರು ಪರಿಶೀಲಿಸಿ

ಮೈಸೂರು: ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಮರುಪರಿಶೀಲಿಸಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಜಾರಿಗೊಳಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಕೋರಿದ್ದಾರೆ.


ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚನೆಯಾದ ದಿನವೇ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ. ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿದೆ. ಆದರೆ, ಈ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲ ವಿದ್ಯುತ್ ನಿಗಮಗಳಲ್ಲಿ ಏಪ್ರಿಲ್‌ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಿಸಲಾಗಿದೆ ಎಂದು ಸಿಎಂ ಬರೆದಿರುವ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.


ಇದು ಈಗಾಗಲೇ ಹಿಂದಿನ ಸರ್ಕಾರದಲ್ಲಿ ಹೆಚ್ಚಾಗಿದ್ದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ಆದರೆ ಜನರು ಬೆಲೆಯನ್ನು ಈಗಿನ ಸರ್ಕಾರ ಹೆಚ್ಚಿಸಿದೆ ಎಂಬುದಾಗಿ ತಿಳಿದುಕೊಂಡಿದ್ದಾರೆ. ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ವಿದ್ಯುತ್ ಬೆಲೆ ಏರಿಕೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.