ಜಿಲ್ಲೆ

ವಿದ್ಯುತ್ ಬಿಲ್ ಪಾವತಿಗೆ ನಿರಾಕರಣೆ

ಚಿತ್ರದುರ್ಗ: ವಿದ್ಯುತ್ ಬಿಲ್ ಪಾವತಿಸುವುದಿಲ್ಲ, ಕೇಳಲು ಮನೆಗಳ ಬಳಿಗೆ ಬರುವಂತಿಲ್ಲ. ಬಿಲ್ ಕಲೆಕ್ಟರ್ ಸೇರಿ ಅಧಿಕಾರಿಗಳು ಬರಬೇಡಿ. ಪ್ರಕೃತಿ ವಿಕೋಪ ಸೇರಿ ಇತರೆ ಸಂದರ್ಭದಲ್ಲಿ ಸಮಸ್ಯೆಯಾದಲ್ಲಿ ಲೈನ್‌ಮ್ಯಾನ್‌ಗಳು ಮಾತ್ರ ಗ್ರಾಮ ಪ್ರವೇಶಿಸಿ ದುರಸ್ತಿಪಡಿಸಿ…

ಸರ್ಕಾರದಿಂದ ಅಧಿಕೃತವಾಗಿ ಅರ್ಹರೆಲ್ಲರಿಗೂ ಗೃಹಜ್ಯೋತಿ ಯೋಜನೆ ಜಾರಿಯಾಗುವವರೆಗೂ ಬಿಲ್ ಪಾವತಿಸುವಂತೆ ಮನವಿ ಮಾಡಲು ತುರುವನೂರು ಹೋಬಳಿ, ಹುಣಸೇಕಟ್ಟೆ ಗ್ರಾಮಕ್ಕೆ ಭಾನುವಾರ ಬಂದಿದ್ದ ಬೆಸ್ಕಾಂ ಇಂಜಿನಿಯರ್ ಮತ್ತು ಬಿಲ್ ಪಾವತಿ ಮಾಡಿಕೊಳ್ಳುವ ಆಗಮಿಸಿದ್ದ ಸಿಬ್ಬಂದಿಗೆ ಗ್ರಾಮಸ್ಥರು ನೀಡಿದ ಉತ್ತರವಿದು.

ಗ್ರಾಮದ ಊರ ಮುಂದಿನ ಆಂಜನೇಯ ಸ್ವಾಮಿ ದೇಗುಲದ ಹತ್ತಿರ ಬಹಳ ಸಮಯ ಚರ್ಚಿಸಿದ ಗ್ರಾಮಸ್ಥರು ಯಾವ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದಿಲ್ಲವೆಂದು ಹೇಳಿ, ಅಧಿಕಾರಿಗಳನ್ನು ವಾಪಸು ಕಳುಹಿಸಿದ ಪ್ರಸಂಗ ಜರುಗಿತು. ಸರ್ಕಾರವನ್ನು ಕೇಳಿ ನಮ್ಮ ಬಳಿ ಬರಬೇಡಿ ಎಂಬುದಾಗಿಯೂ ಕೆಲವರು ವಾದ ಮಂಡಿಸಿದರು.

ಹೊಸ ಸರ್ಕಾರ ಬರುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಪ್ರತಿ ಯೂನಿಟ್‌ಗೆ 4.05 ರೂ.ನಿಂದ 4.75 ರೂ.ಗೆ ಹೆಚ್ಚಳವಾಗಿತ್ತು. ಆದರೆ, ಈಗಿನ ದರ ಪ್ರತಿ ಯೂನಿಟ್‌ಗೆ 7 ರೂ. ಆಗಿದೆ. ಇದರಿಂದಾಗಿ 2.28 ರೂ. ಅಧಿಕವಾಗಿದೆ. ಮೀಟರ್ ಬಾಡಿಗೆ 85 ರೂ. ಇದ್ದದ್ದು, 110 ರೂ.ಗೆ ಏರಿಕೆಯಾಗಿದೆ. ಆದ್ದರಿಂದ ನಾವುಗಳ್ಯಾರು ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಮಾಧಾನಪಡಿಸಲು ಮುಂದಾದ ವೇಳೆ ಹೆಚ್ಚಿಸಿರುವ ದರ ಕಡಿತಗೊಳಿಸಿ, ಮೊದಲಿನಂತೆ ಯೂನಿಟ್‌ಗೆ 4.05 ರೂ.ನಂತೆ ಶುಲ್ಕ ನಿಗದಿಪಡಿಸಿ ನೋಡೋಣ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಎಸ್.ಪಾಲಯ್ಯ, ಮಾಜಿ ಸದಸ್ಯ ಗುರುಮೂರ್ತಿ, ಸದಸ್ಯ ಮಹಂತೇಶ್, ಕೋಲಾರದ ನಾಗರಾಜ್, ಪೂಜಾರಿ ಮಾರುತಿ, ರಂಗೇಗೌಡ, ಕಾಂತರಾಜ್ ಇತರರಿದ್ದರು.