ಜಿಲ್ಲೆ

ವಿದ್ಯುತ್ ಪ್ರವಹಿಸಿ ಲಾರಿ ಕ್ಲೀನರ್ ದುರ್ಮರಣ

ಬೆಂಗಳೂರು: ವಿಲ್ಸನ್ ಗಾರ್ಡ್‌ನ್‌ನಲ್ಲಿ ಲಾರಿ ಹಿಂತೆಗೆದುಕೊಳ್ಳುತ್ತಿದ್ದಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಪ್ರವಹಿಸಿ ಲಾರಿ ಕ್ಲೀನರ್ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶ ಮೂಲದ ರಾಜ್‌ಕಿಶೋರ್ (40) ಮೃತಪಟ್ಟವರು. ಬ್ಯಾಟರಾಯನಪುರ ನಿವಾಸಿ ಸತ್ಪಾಲ್ ವರ್ಮಾ ನೀಡಿದ ದೂರಿನ ಆಧಾರದ ಮೇಲೆ ಲಾರಿ ಚಾಲಕ ಅಶ್ವಾನಿ ಕುಮಾರ್ ಆವಸ್ತಿ (43) ವಿರುದ್ಧ ವಿಲ್ಸನ್‌ಗಾರ್ಡನ್ ಪೊಲೀಸರು ಎ್ಐಆರ್ ದಾಖಲಿಸಿಕೊಂಡಿದ್ದಾರೆ.

ಸ್ಪತ್ಪಾಲ್ ವರ್ಮಾ ಮೆಟಿರಿಯಲ್ ಪೂರೈಕೆ ಮಾಡುವ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾರೆ. ಸೆ.26ರಂದು ದೆಹಲಿಯಿಂದ ಬಟ್ಟೆಗಳು, ಚಪ್ಪಲಿಗಳು, ಟೈಲ್ಸ್ ಹಾಗೂ ಸೊಳ್ಳೆಬತ್ತಿಗಳನ್ನು ಲಾರಿಯಲ್ಲಿ ಸುಧಾಮನಗರದಲ್ಲಿರುವ ಗೋಡೌನ್‌ಗೆ ತರಲಾಗಿತ್ತು. ಅಶ್ವಾನಿ ಕುಮಾರ್ ಲಾರಿ ಚಾಲನೆ ಮಾಡಿಕೊಂಡು ಬಂದಿದ್ದು, ಈತನ ಜತೆಯಲ್ಲಿ ಕ್ಲೀನರ್ ರಾಜ್‌ಕಿಶೋರ್ ಸಹ ಇದ್ದನು. ಲಾರಿಯಲ್ಲಿದ್ದ ವಸ್ತುಗಳನೆಲ್ಲಾ ಅನ್‌ಲೋಡ್ ಮಾಡಿ ಲಾರಿಯನ್ನು ಹಿಂತೆಗೆದುಕೊಳ್ಳುತ್ತಿದ್ದಾಗ ರಾಜ್‌ಕಿಶೋರ್ ಲಾರಿಯ ಹಿಂಭಾಗ ಹಿಡಿದುಕೊಂಡು ಕೈ ಸನ್ನೆ ಮಾಡುತ್ತಿದ್ದ. ಆ ವೇಳೆ ಮೇಲೆ ಹರಿದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಲಾರಿಯ ಒಂದು ಭಾಗ ತಾಗಿತ್ತು. ಪರಿಣಾಮ ರಾಜ್‌ಕಿಶೋರ್‌ಗೆ ವಿದ್ಯುತ್ ಪ್ರವಹಿಸಿ ಗಂಬೀರವಾಗಿ ಗಾಯಗೊಂಡಿದ್ದ. ಈತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.