ಮೈಸೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 1.46 ಪೈಸೆಯಷ್ಟು ಏರಿಕೆ ಮಾಡ ಬೇಕು ಎಂಬ ಪ್ರಸ್ತಾವನೆಯನ್ನು ಆಯೋಗದ ಮುಂದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಇಟ್ಟಿದ್ದು, ಇದಕ್ಕೆ ರೈತರು, ಕೈಗಾರಿಕೋದ್ಯಮಿಗಳಿಂದ ಆಕ್ಷೇಪ ವ್ಯಕ್ತವಾಯಿತು.
2023-24ನೇ ಆರ್ಥಿಕ ಸಾಲಿನಲ್ಲಿ ವಿದ್ಯುತ್ ಪೂರೈಕೆಗೆ ಸರಾಸರಿ 6622.48 ಕೊಟಿ ರೂ. ವೆಚ್ಚವಾಗುವ ನಿರೀಕ್ಷೆ ಇದ್ದು, ಒಟ್ಟು 5572.74 ಕೋಟಿ ರೂ. ಕಂದಾಯ ವಸೂಲಾತಿ ಆಗುವ ನಿರೀಕ್ಷೆ ಇದೆ. ಹೀಗಾಗಿ ಆರ್ಥಿಕ ವರ್ಷ 2023-24ಕ್ಕೆ ಒಟ್ಟು 1049.74 ಕೋಟಿ ರೂ. (ಈ ಪೈಕಿ 2021-22ನೇ ಸಾಲಿನ ಕೊರತೆ 382.57 ಕೋಟಿ ರೂ. ಒಳಗೊಂಡಿದೆ) ಕೊರತೆ ಎದುರಾಗಲಿದ್ದು, ಇದಕ್ಕೆ ಪೂರಕವಾಗಿ ಪ್ರತಿ ಯೂನಿಟ್‌ಗೆ 1.46 ಪೈಸೆ ಏರಿಕೆ ಮಾಡಬೇಕು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಮನವಿ ಮಾಡಿದರು.
2023-24ನೇ ಸಾಲಿನಲ್ಲಿ 4,603.20 ಕೋಟಿ ರೂ. ಮೊತ್ತದ 8245.68 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡುವ ಗುರಿ ಇದ್ದು, ಈ ಪೈಕಿ 7167.89 ದಶಲಕ್ಷ ಯೂನಿಟ್ ವಿದ್ಯುತ್ ಮಾರಾಟ ನಿರೀಕ್ಷೆ ಹೊಂದಲಾಗಿದೆ. ವಿದ್ಯುತ್ ಖರೀದಿ ವೆಚ್ಚ, ಕಾರ್ಯ ಮತ್ತು ಪಾಲನೆ ವೆಚ್ಚ, ಸವಕಳಿ, ಬಡ್ಡಿ ಹಾಗೂ ಆರ್ಥಿಕ ವೆಚ್ಚ, ಗ್ರಾಹಕ ಶಿಕ್ಷಣ ಹಾಗೂ ಇತರೆ ಖರ್ಚು ಸೇರಿದರೆ ಪ್ರತಿ ಯೂನಿಟ್‌ಗೆ 1.46 ಪೈಸೆ ಹೆಚ್ಚಳ ಅನಿವಾರ್ಯವಾಗಿದ್ದು, ದರ ಏರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.