ಚಿತ್ರದುರ್ಗ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದ ಕ್ರಮ ವಿರೋಧಿಸಿ ರಾಜ್ಯ ರೈತಸಂಘ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಬೆಸ್ಕಾಂ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬರಪೀಡಿತ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆಯೇ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ಹೂವು, ಹಣ್ಣು, ತರಕಾರಿ ಒಳಗೊಂಡು ಅನೇಕ ಪ್ರಮುಖ ಬೆಳೆಗಳು ಬಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಉಳಿದ ಅಲ್ಪ-ಸ್ವಲ್ಪ ಬೆಳೆಗಳಿಗೆ ನುಸಿರೋಗ ತಗಲುವ ಲಕ್ಷಣ ಕಂಡು ಬರುತ್ತಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಮರ್ಪಕ ವಿದ್ಯುತ್ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೊಳವೆಬಾವಿ, ಪಂಪ್‌ಸೆಟ್‌ಗಳನ್ನು ನಂಬಿಕೊಂಡಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಿತ್ಯ 7 ಗಂಟೆ ಪೂರೈಸಬೇಕಿದ್ದ ವಿದ್ಯುತ್ ಅನ್ನು ಹಗಲಿನಲ್ಲಿ ಎರಡೂವರೆ, ರಾತ್ರಿ 2 ಗಂಟೆ ನೀಡುತ್ತಿದ್ದು, 3 ಗಂಟೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಬೆಳೆಗಳು ಒಣಗುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸತತ 15 ದಿನಗಳಿಂದ ಈ ರೀತಿ ಸತಾಯಿಸುತ್ತಿದ್ದು, ಹಲವೆಡೆ ಪಂಪ್‌ಸೆಟ್ ಮೋಟಾರು ಸುಟ್ಟು ಹೋಗಿವೆ. ಹೀಗಾಗಿ ನಿಗದಿತ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕೋರಿದರು.
ಸೇನೆ ಜಿಲ್ಲಾ ಅಧ್ಯಕ್ಷ ಈ.ಎನ್.ಲಕ್ಷ್ಮ್ಮಿಕಾಂತ್, ಪದಾಧಿಕಾರಿಗಳಾದ ಜಿ.ಬಿ.ಪಾಪಣ್ಣ, ಶಿವಮೂರ್ತಿ, ಶ್ರೀಧರ್‌ರೆಡ್ಡಿ, ಅಂಜಿನಪ್ಪ, ರಾಜೇಂದ್ರರೆಡ್ಡಿ, ಎಸ್.ಕುಮಾರ್, ಸಿ.ಕುಮಾರ್, ಎನ್.ಬಾಬುರೆಡ್ಡಿ, ಗಿರೀಶ್, ಧನಂಜಯರೆಡ್ಡಿ ಇತರರಿದ್ದರು.