ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ಸುರಕ್ಷತೆಯ ಕ್ರಮ

ಶ್ರೀರಂಗಪಟ್ಟಣ: ಕ್ಷೇತ್ರದಲ್ಲಿ ವಿದ್ಯುತ್ ಅವಘಡಗಳನ್ನು ಪರಿಣಾಮಕಾರಿಯಾಗಿ ತಪ್ಪಿಸಿ ಜನರಿಗೆ ಸಮಪರ್ಕ ವಿದ್ಯುತ್ ಪೂರೈಸಲು ಸುರಕ್ಷ ಕವಚವಿರುವ ಕಂಡಕ್ಟರ್ ಕೇಬಲ್ ಅಳವಡಿಕೆ ಕಾಮಗಾರಿಗೆ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ನಿಗಮ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಸೋಮವಾರ ಚಾಲನೆ ನೀಡಿದರು.

ಪಟ್ಟಣದ ಗಂಜಾಂನ ನಿಮಿಷಾಂಬ ದೇಗುಲದ ಮುಂಭಾಗ ಸೆಸ್ಕ್ ವತಿಯಿಂದ ಹಮ್ಮಿಕೊಂಡಿದ್ದ 5 ಕೋಟಿ ರೂ.ವೆಚ್ಚದ ತಂತಿ ಮಾರ್ಗಗಳ ಆಧುನೀಕರಣ ಕಾಮಗಾರಿಗೆ ಪಟ್ಟಣ ಪುರಸಭೆಯ ಸದಸ್ಯರೊಂದಿಗೆ ಭೂಮಿಪೂಜೆ ನೆರವೇರಿಸಿದರು.

ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಿರುವ ಬಡಾವಣೆಗಳು, ಸಣ್ಣ, ಅತಿಸಣ್ಣ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನವಸತಿ ಇರುವ ಪ್ರದೇಶಗಳು ಸೇರಿದಂತೆ ಜನದಟ್ಟಣೆ ಕಂಡುಬರುವ ಪ್ರಸಿದ್ಧ ದೇವಾಲಯಗಳ ಬಳಿ ಈ ಹಿಂದಿನ ಮಾದರಿಯಲ್ಲಿ ಅಳವಡಿಸಿರುವ ಅಲ್ಯೂಮಿನಿಯಂ ತಂತಿಗಳು ಸ್ಪರ್ಶಗೊಂಡು ಅಪಾಯಕಾರಿ ಬೆಂಕಿ ಅವಘಡಗಳು ಉಂಟಾಗುತ್ತಿತ್ತು. ಜತೆಗೆ ಒಂದೇ ಸ್ಥಳದಲ್ಲಿ ಎರಡೆರಡು ಮಾರ್ಗಗಳ ಸಂಪರ್ಕ ಅಳವಡಿಸಿರುವ ಕಾರಣ ವಿದ್ಯುತ್ ನಿರ್ವಹಣೆ ದುರಸ್ತಿ ಸಮಯದಲ್ಲಿ ವಿದ್ಯುತ್ ಕಡಿತದ ತೊಡಕು ಉಂಟಾಗುತ್ತಿತ್ತು.

ಇದೀಗ ಅವುಗಳಿಂದ ಜನರಿಗೆ ಸುರಕ್ಷತೆ ಕಲ್ಪಿಸುವ ಜತೆಗೆ ಸಮರ್ಪಕ ವಿದ್ಯುತ್ ಪೂರೈಸಲು ಹೊಸ ಮಾದರಿಯಲ್ಲಿ ಗ್ರಾಮಗಳ ಟ್ರಾನ್ಸ್‌ಫಾರ್ಮರ್‌ಗಳ 11ಕೆ.ವಿ ಪೂರೈಸುವ ಹೈಟೆನ್ಷನ್(ಎಚ್.ಟಿ)ಗಳಿಗೆ ಪವರ್ ಕಂಡಕ್ಟರ್ ಹಾಗೂ 400ರಿಂದ 230 ವೋಲ್ಟ್ಸ್‌ಗಳ ಲೋ ಟೆನ್ಷನ್ ತಂತಿಗಳಿಗೆ ಏರಿಯಲ್ ಪಂಚಡ್( ಸುರಕ್ಷ ಮೇಲ್ಮೈ ಕವಚವಿರುವ)ಕೇಬಲ್‌ಗಳನ್ನು ಕ್ಷೇತ್ರದ ಆಯ್ದ ಸೂಕ್ಷ್ಮಹಾಗೂ ಅಗತ್ಯ ಸ್ಥಳಗಳಲ್ಲಿ ಅಳವಡಿಸುವ ಕಾಮಗಾರಿಗೆ ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ರೈತರಿಗೆ ವಿದ್ಯುತ್ ಪೂರೈಕೆಗೆ ಎದುರಾಗುತ್ತಿದ್ದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುವ ಜತೆಗೆ ರೈತಾಪಿ ಜನ-ಜಾನುವಾರುಗಳ ಪ್ರಾಣ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಗುತ್ತಿಗೆ ಪಡೆದ ಐಕಾನ್ ಇನ್ಫ್ರಾ ಕಂಪನಿ ಶೀಘ್ರ ಸಮಯದಲ್ಲಿ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ ಜನರಿಗೆ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವಂತೆ ಗುತ್ತಿಗೆದಾರರು ಹಾಗೂ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ದಯಾನಂದ್, ಎಸ್.ನಂದೀಶ್, ನಿರ್ಮಲಾ, ಮಂಗಳಮ್ಮ, ಪೂರ್ಣಿಮಾ, ಗೀತಾ, ಪಾಂಡವಪುರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿನುತಾ, ಶ್ರೀರಂಗಪಟ್ಟಣ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಪ್ರಸಾದ್, ಜೂನಿಯರ್ ಇಂಜಿನಿಯರ್ ಪ್ರದೀಪ್, ವಿದ್ಯುತ್ ಗುತ್ತಿಗೆದಾರ ಕೃಷ್ಣ, ಮುಖಂಡರಾದ ಲೋಕೇಶ್, ಸೋಮಸುಂದರ್, ಮಲ್ಲುರಾಜೇ ಅರಸ್, ಬಾಲು ಹಾಗೂ ನಿಮಿಷಾಂಬ ದೇವಾಲಯ ಸೇರಿದಂತೆ ಪುರಸಭಾ ಅಧಿಕಾರಿಗಳು ಹಾಜರಿದ್ದರು.