ಚಾಮರಾಜನಗರ: ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪಟ್ಟಣದ ಪೆಟ್ರೋಲ್ ಬಂಕ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮೂಲಕ ಸೆಸ್ಕ್ ಕಚೇರಿ ಆವರಣಕ್ಕೆ ತೆರಳಿ ಇಲಾಖೆಯ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹನೂರು ಭಾಗವು ಕಾಡಂಚಿನಿಂದ ಕೂಡಿದ್ದು, ಹೆಚ್ಚಿನ ರೈತರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಸೆಸ್ಕ್ ಇಲಾಖೆ ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಕೃಷಿ ನೀರಾವರಿಗೆ ಅನುಕೂಲವಾಗುವಂತೆ ನಿತ್ಯ 7 ಗಂಟೆ ವಿದ್ಯುತ್ ಪೂರೈಕೆ ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ಇನ್ನು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಸಕಾಲಕ್ಕೆ ರಿಪೇರಿ ಮಾಡುತ್ತಿಲ್ಲ. ಜತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರ ಪಂಪ್‌ಸೆಟ್‌ಗಳಿಗೆ ಟಿಸಿ ಅಳವಡಿಸಿಲ್ಲ. ಇದರಿಂದ ರೈತರು ತುಂಬ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಗಮನಹರಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಜತೆಗೆ ಈಗಾಗಲೇ ನಷ್ಟವಾಗಿರುವ ಬೆಳೆಗಳಿಗೆ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸೆಸ್ಕ್ ಎಇಇ ಶಂಕರ್ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರಿಂದ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಸೋಲಾರ್ ವಿದ್ಯುತ್ ಕಡಿಮೆ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಪಂಪ್‌ಸೆಟ್‌ಗಳಿಗೆ 3 ಅವಧಿಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದರು.
ಭಾರತೀಯ ಕಿಸಾನ್ ಸಂಘ ಮೈಸೂರು ಪ್ರಾಂತ್ಯಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷ ಲಿಂಗರಾಜು, ಮಾಜಿ ಅಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಬೋಸ್ಕೋ, ಖಜಾಂಚಿ ಶಾಂತಮಲ್ಲಪ್ಪ, ತಾಲೂಕು ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸದಾನಂದ, ರೈತ ಮುಖಂಡರಾದ ಮಂಗಲ ವಿಶ್ವೇಶ್ವರ್ ಪ್ರಸಾದ್, ಶಿವಸ್ವಾಮಿ, ಸಿದ್ದಪ್ಪ, ಕೃಷ್ಣಮೂರ್ತಿ, ಬಸವಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.