ಶನಿವಾರಸಂತೆ: ಸಮೀಪದ ಹಂಡ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರು ಅಳವಡಿಸಿರುವ 10 ಎಚ್‌ಪಿವರೆಗಿನ ಮೋಟಾರ್‌ಗಳಿಗೆ ಬಿಲ್ ಬಾಕಿ ಕಾರಣವೊಡ್ಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ರೈತರು ಬುಧವಾರ ಶನಿವಾರಸಂತೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೇಸಿಗೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳು ಮೆಣಸು ಮತ್ತು ಇತರ ತೋಟದ ಬೆಳೆಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸುವುದು ಅತ್ಯಗತ್ಯ. ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿದ್ಯುತ್ ಬಾಕಿ ನೆಪದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿರುವ ಸೆಸ್ಕ್ ಕ್ರಮ ಸರಿಯಲ್ಲ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
ಅಲ್ಲದೆ ಈ ಸಂಬಂಧ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರು ಸಹ ಸೆಸ್ಕ್ ಅಧಿಕಾರಿಗಳಿಗೆ ಮನವಿ ನೀಡಿ ರೈತರ ಪಂಪ್‌ಸೆಟ್‌ಗಳಿಗೆ ಮತ್ತೆ ವಿದ್ಯುತ್ ಪೂರೈಸುವಂತೆ ಕೋರಿದ್ದರು. ಅಲ್ಲದೆ ಈ ಸಂಬಂಧ ಅಧಿವೇಶನದಲ್ಲಿ ಚರ್ಚಿಸಿ, ಸಭೆಯನ್ನು ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ತನಕ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮೌಕಿಕವಾಗಿ ಸೂಚಿಸಿದ್ದರು. ಆದರೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತುಂಬ ಬಿಸಿಲು ಇದ್ದ ಸಂದರ್ಭದಲ್ಲಿ ಮಾತ್ರ ಕಾಫಿ ತೋಟಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸುತ್ತೇವೆ. ಮಳೆಯಾದರೆ ನಮಗೆ ಇದರ ಅಗತ್ಯ ಇರುವುದಿಲ್ಲ. ಕಾಫಿ ಹೂ ಬಿಡಲು ಮತ್ತು ಕಾಳು ಮೆಣಸಿಗೆ ಈಗ ನೀರು ಹಾಯಿಸುವುದು ತುರ್ತು ಎನಿಸಿದೆ. ಇಂತಹ ಸಂದರ್ಭದಲ್ಲಿ ಸೆಸ್ಕ್ ಕ್ರಮ ಸರಿಯಲ್ಲ. ಆದ್ದರಿಂದ ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಬೇಕು ಎಂದು ಸೆಸ್ಕ್ ಶಾಖಾಧಿಕಾರಿ ಸುದೀಪ್ ಅವರನ್ನು ಆಗ್ರಹಿಸಿದರು.
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ರೈತರ ಕೃಷಿ ಬಳಕೆಯ 1 ಎಚ್‌ಪಿಯಿಂದ 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಸೆಸ್ಕ್‌ನವರು ರೈತರು ಈ ಹಿಂದೆ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿ ಮಾಡಿಲ್ಲ ಎಂದು ವಿದ್ಯುತ್ ಕಡಿತಗೊಳಿಸಿರುವುದು ಸರಿಯಲ್ಲ ಎಂದು ದೂರಿದರು.
ರೈತರು ಈ ಹಿಂದೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಳಕೆ ಬಿಲ್ ಅನ್ನು ಪಾವತಿಸಿದ ನಂತರವೇ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ರೈತರು ಉಚಿತ ವಿದ್ಯುತ್ ಪಡೆಯಬಹುದು. ಇಲಾಖೆಯ ಸೂಚನೆಯಂತೆ ಬಿಲ್ ಬಾಕಿ ಉಳಿಸಿಕೊಂಡಿರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸುದೀಪ್ ಈ ವೇಳೆ ರೈತರಿಗೆ ಸ್ಪಷ್ಟಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು, ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಮಾನವೀಯ ನೆಲೆಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ, ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿರುವ ಪಂಪ್‌ಸೆಟ್‌ಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಪ್ರತಿಭಟನಾನಿರತರಿಗೆ ಭರವಸೆ ನೀಡಿದರು. ನಂತರು ರೈತರು ಪ್ರತಿಭಟನೆ ಹಿಂಪಡೆದರು.
ಹಂಡ್ಲಿ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಮಧು ಪ್ರತಿಭಟನೆ ನೇತೃತ್ವ ವಹಿಸಿದ್ದರು. ರೈತ ಮುಖಂಡರಾದ ಮನು ಹೆಬ್ಲುಸೆ, ಮಹದೇವಪ್ಪ, ಸಂದೀಪ್, ಎಸ್.ಕೆ.ವೀರಪ್ಪ, ಎಸ್.ಕೆ.ಶಿವಪ್ಪ, ವೇಣುಕುಮಾರ್, ಶಿವಕುಮಾರ್ ಮತ್ತಿತರರಿದ್ದರು.