ವಿದ್ಯುತ್ ದರ ಏರಿಕೆಯಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣವೇ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಯ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಚುನಾವಣೆ ಪೂರ್ವದಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸಿದೆ. ಆದರೆ ಈಗ ಗೃಹಜ್ಯೋತಿ ಯೋಜನೆ ಜಾರಿಯಾಗುವ ಮೊದಲೇ ವಿದ್ಯುತ್ ದರವನ್ನು ಏರಿಕೆ ಮಾಡಿರುವುದು ಸಾರ್ವಜನಿಕರು ಕಂಗಾಲಾಗಿದ್ದಾರೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಜತೆಗೆ ಕೈಗಾರಿಕೆಗಳು, ಸಣ್ಣಪುಟ್ಟ ವಾಣಿಜ್ಯೋದ್ಯಮಿಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ. ಆದ್ದರಿಂದ ಸರ್ಕಾರ ಮಧ್ಯೆ ಪ್ರವೇಶಿಸಿ ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉಚಿತ ವಿದ್ಯುತ್ ಕೊಡುವ ನೆಪದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಅತ್ಯಂತ ಖಂಡನೀಯ. ದರ ಹೆಚ್ಚಳದಿಂದಾಗಿ ವಿದ್ಯುತ್ ಬಿಲ್‌ನಲ್ಲಿ ದುಪ್ಪಟ್ಟು ದರ ಬಂದಿದ್ದು. ವಿದ್ಯುತ್ ಬಿಲ್ ಕಟ್ಟಲಾಗದೆ ಜನರು ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಂಡು ಜನರ ಹಿತ ಕಾಯಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕ ಮಂಜುನಾಥ ದತ್ತ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಾ.ವೈ.ಎಸ್.ವೀರಭಧ್ರಪ್ಪ, ಪತ್ರಕರ್ತ ವೆಂಕಟೇಶ್, ದಲಿತ ಮುಖಂಡ ಎಚ್.ಕೆ.ಸಂದೇಶ್, ಅರವಿಂದ್, ಪೃಥ್ವಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.