ಬಾಗಲಕೋಟೆ: ಮೀನಿನಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿ ಪರಸ್ಪರ ತಗುಲಿ ಕಿಡಿ ಹಾರಿಬಿದ್ದ ಪರಿಣಾಮ ೬ ಎಕರೆ ಕಬ್ಬು ಬೆಳೆ ನಾಶವಾಗಿರುವ ಘಟನೆ ಬಾದಾಮಿ ತಾಲೂಕಿನ ತಳಕವಾಡ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಿರನೂರ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಇರುವ ತಳಕವಾಡ ಗ್ರಾಮದ ಮೂವರ ರೈತರ ತಲಾ ಎರಡು ಎಕರೆ ಕಬ್ಬು ಬೆಳೆ ಬೆಂಕಿಗೆ ಸಿಕ್ಕು ಸುಟ್ಟು ಕರಕಲಾಗಿದೆ.
ತಳಕವಾಡ ಗ್ರಾಮದ ರೈತರಾದ ಈಶ್ವರ ಬಡಿಗೇರ, ಪದ್ದವ್ವ ಬಡಿಗೇರ ಹಾಗೂ ಈರಣ್ಣ ಬಡಿಗೇರ ಎನ್ನುವವರ ತಲಾ ಎರಡು ಎಕರೆ ಸೇರಿ ಒಟ್ಟು ಆರು ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.
ಜಮೀನಿನಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ತಾಕಿಕೊಂಡು ಈ ಅವಘಡ ಸಂಭವಿಸಿದೆ. ವಿಷಯ ತಿಳಿದು ಗದಗ ಜಿಲ್ಲೆ ನರಗುಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ರೈತರು ಸೇರಿಕೊಂಡು ಬೆಂಕಿ ನಂದಿಸಿದ್ದಾರೆ. ಆದರೆ, ಬೆಳೆಮಾತ್ರ ನಾಶವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಅಗ್ನಿ ದುರಂತದಿಂದ ಲಕ್ಷಾಂತರ ಖರ್ಚು ಮಾಡಿ ವರ್ಷಗಟ್ಟಲೇ ಬೆವರು ಸುರಿಸಿ ಬೆಳೆದಿದ್ದ ಬೆಳೆ ನಾಶವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬ ಅಧಿಕಾರಿ ಸಹ ಸ್ಥಳಕ್ಕೆ ಭೇಟಿ ನೀಡಿ ಬೆಳೆಹಾನಿ ವೀಕ್ಷಣೆ ಮಾಡಿಲ್ಲ. ಇದೀಗ ಇನ್ನೂ ಕಬ್ಬಿನ ಕಾರ್ಖಾನೆಗಳು ಆರಂಭವಾಗದೇ ಇರುವುದರಿಂದ ಅಳಿದುಳಿದ ಕಬ್ಬು ಸಹ ಕಾರ್ಖಾನೆಗೆ ಕಳುಹಿಸಲು ಆಗಲ್ಲ. ಹೀಗಾಗಿ ಎಲ್ಲವೂ ನಷ್ಟ ಆಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೆಳೆಹಾನಿ ಬಗ್ಗೆ ತನಿಖೆ ನಡೆಸಿ, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.